ಉಡುಪಿ, ಮೇ 15 (DaijiworldNews/SM): ಕೊರೊನಾ ಮುಕ್ತವಾಗಿದ್ದ ಉಡುಪಿ ಜಿಲ್ಲೆಯಲ್ಲಿ ಐದು ಪಾಸಿಟಿವ್ ಪ್ರಕರಣಗಳು ದಾಖಲಾಗಿದ್ದ ಶುಕ್ರವಾರದಂದು ಮತ್ತೊಂದು ಪಾಸಿಟಿವ್ ಪ್ರಕರಣ ಪತ್ತೆಯಾಗಿದೆ. ಒಂದು ವರ್ಷದ ಮಗುವಿನಲ್ಲಿ ಇದೀಗ ಸೋಂಕು ದೃಢಪಟ್ಟಿದೆ.
ಇನ್ನು ಮಗು ಕೂಡ ಮೇ 12ರಂದು ಮಂಗಳೂರಿಗೆ ಆಗಮಿಸಿದ ವಿಮಾನದಲ್ಲಿ ತನ್ನ ಪೋಷಕರೊಂದಿಗೆ ಆಗಮಿಸಿತ್ತು. ಈಗಾಗಲೇ ಮಧ್ಯಾಹ್ನ ಮಗುವಿನ ತಂದೆ ಹಾಗೂ ತಾಯಿಯಲ್ಲಿ ಪಾಸಿಟಿವ್ ಕಂಡುಬಂದಿತ್ತು. ಇದೀಗ ಸಂಜೆಯ ಹೆಲ್ತ್ ಬುಲೆಟಿನ್ ನಲ್ಲಿ ಮಗುವಿಗೆ ಪಾಸಿಟಿವ್ ಬಂದಿದೆ. ಆ ಮೂಲಕ ಉಡುಪಿ ಜಿಲ್ಲೆಯಲ್ಲಿ ಸದ್ಯ ಇರುವ ಸೋಂಕಿತರ ಸಂಖ್ಯೆ 6ಕ್ಕೆ ಏರಿಕೆಯಾಗಿದೆ.
ಒಂದು ವರ್ಷದ ಮಗು ತಾಯಿಯೊಂದಿಗೆ ಆಸ್ಪತ್ರೆಯಲ್ಲಿತ್ತು ಎನ್ನಲಾಗಿದೆ. ಇದೀಗ ಮಗುವನ್ನು ಪ್ರತ್ಯೇಕವಾಗಿರಿಸಿ ಚಿಕಿತ್ಸೆ ನೀಡಲು ಸಿದ್ದತೆಗಳು ನಡೆಯುತ್ತಿದೆ.
ಇನ್ನು ಮೇ 15ರ ಶುಕ್ರವಾರ ಮಧ್ಯಾಹ್ನ ಉಡುಪಿ ಜಿಲ್ಲೆಯ ಐವರಲ್ಲಿ ಕೊರೊನಾ ಪಾಸಿಟಿವ್ ಕಂಡುಬಂದಿತ್ತು. ಇವರೆಲ್ಲರೂ ಮೇ 12ರಂದು ದುಬೈನಿಂದ ಮಂಗಳೂರಿಗೆ ಆಗಮಿಸಿದ್ದರು. ಮಂಗಳೂರು ವಿಮಾನ ನಿಲ್ದಾಣದಲ್ಲಿ ಸ್ಕ್ರೀನಿಂಗ್ ನಡೆಸಿದ ಬಳಿಕ ಅವರನ್ನು ಉಡುಪಿಗೆ ಕಳುಹಿಸಲಾಗಿತ್ತು. ಅಲ್ಲಿ ಅವರ ಸ್ವಾಬ್ ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಲಾಗಿದ್ದು, ಇಂದು ಪರೀಕ್ಷಾ ವರದಿ ಲಭ್ಯವಾಗಿದ್ದು ಐವರಲ್ಲಿ ಪಾಸಿಟಿವ್ ಬಂದಿದೆ. ಇನ್ನು ಇಂದು ಸಂಜೆಯ ವೇಳೆ ಒಂದು ಮಗುವಿನಲ್ಲಿ ಪಾಸಿಟಿವ್ ಕಂಡುಬಂದಿದೆ.