ಬೆಳ್ತಂಗಡಿ, ಮೇ 15 (DaijiworldNews/SM): ತಾಲೂಕಿನ ಬಂದಾರು ಗ್ರಾ.ಪಂ. ವ್ಯಾಪ್ತಿಯ ಕಲ್ಲರ್ಬಿ ಸಮೀಪದ ರಸ್ತೆಬದಿ 15ಕ್ಕೂ ಅಧಿಕ ಕೋತಿಗಳ ಮೃತದೇಹಗಳು ಶುಕ್ರವಾರ ಪತ್ತೆಯಾಗಿವೆ.
ಬಂದಾರು ಗ್ರಾಮದ ಕುಂಟಾಲಪಲ್ಕೆ-ಪದ್ಮುಂಜ ಸಾಗುವ ರಸ್ತೆಯಲ್ಲಿ ಕಲ್ಲರ್ಬಿ ಸೇತುವೆ ಬಳಿ ಗುರುವಾರ ರಾತ್ರಿ 9.30ಕ್ಕೆ ಸುಮಾರು 50 ಕ್ಕೂ ಅಧಿಕ ಮಂಗಗಳು ಸತ್ತು ಬಿದ್ದಿರುವುದನ್ನು
ಸ್ಥಳೀಯರು ಗಮನಿಸಿದ್ದರಲ್ಲದೆ ಈ ಕುರಿತು ಸಂಬಂಧಪಟ್ಟವರಿಗೆ ಶುಕ್ರವಾರ ಮಾಹಿತಿ ನೀಡಿದ್ದರು.
ಆದರೆ ಶುಕ್ರವಾರ ಬೆಳಗ್ಗೆ 15 ವಾನರಗಳ ಮೃತದೇಹ ಮಾತ್ರ ಪತ್ತೆಯಾಗಿದ್ದು, ಉಳಿದ ಮಂಗಗಳು ಕಾಣೆಯಾಗಿವೆ. ಮಂಗಗಳ ತಲೆಗೆ ಗಂಭೀರ ಗಾಯವಾಗಿದ್ದು, ಮೇಲ್ನೋಟಕ್ಕೆ ವಿಷಪ್ರಾಶನಗೈದು ಸಾಯಿಸಿರಬಹುದು ಎಂದು ಅರಣ್ಯ ಇಲಾಖೆ ಹಾಗೂ ವೈದ್ಯಾಧಿಕಾರಿಗಳು ಶಂಕೆ ವ್ಯಕ್ತಪಡಿಸಿದ್ದಾರೆ. ಗುರುವಾರ ರಾತ್ರಿ 50 ರಷ್ಟಿದ್ದ ಮಂಗಗಳ ಮೃತದೇಹ ಶುಕ್ರವಾರ ಬೆಳಗ್ಗೆ 15 ಮಾತ್ರ ಪತ್ತೆಯಾಗಿರುವುದು ಅನುಮಾನಕ್ಕೆ ಕಾರಣವಾಗಿದೆ.
ಅರಣ್ಯ ಇಲಾಖೆ ಅಧಿಕಾರಿಗಳು ಹೇಳುವಂತೆ ಅಲ್ಪ ಪ್ರಮಾಣದ ವಿಷ ಪ್ರಾಶನ ಸೇವಿಸಿದ್ದ ಮಂಗಗಳು ಚೇತರಿಸಿ ಕಾಡಿಗೆ ತೆರಳಿರುವ ಸಾಧ್ಯತೆ ಇರುವುದಾಗಿ ತಿಳಿಸಿದ್ದಾರೆ. ಗುರುವಾರ ರಾತ್ರಿ ಬಂದಾರು ಆಸುಪಾಸು ಉತ್ತಮ ಮಳೆಯಾಗಿದ್ದು, ವಿದ್ಯುತ್ ಇಲ್ಲದ ಸಮಯದಲ್ಲಿ ಬೇರೆಡೆ ಕೃತ್ಯ ನಡೆಸಿ ತಂದು ಹಾಕಿರುವ ಸಾಧ್ಯತೆಯೂ ಇದೆ ಎನ್ನಲಾಗಿದೆ.
ಸ್ಥಳಕ್ಕೆ ತಾ.ಪಂ. ಸದಸ್ಯ ಕೃಷ್ಣಯ್ಯ ಆಚಾರ್, ಬಂದಾರು ಗ್ರಾ.ಪಂ. ಅಧ್ಯಕ್ಷ ಉದಯ ಬಿ.ಕೆ., ಪಿ.ಡಿ.ಒ. ಮೋಹನ್ ಬಂಗೇರ, ಮಡಂತ್ಯಾರು ಪಶುವೈದ್ಯಾಧಿಕಾರಿ ವಿನಯ್ ಕುಮಾರ್, ಪದ್ಮುಂಜ ಆಸ್ಪತ್ರೆ ವೈದ್ಯಾಧಿಕಾರಿ ಡಯನಾ ಸವಿತಾ, ಪುತ್ತೂರು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಸುಬ್ರಹ್ಮಣ್ಯ ರಾವ್, ವಲಯ ಅರಣ್ಯಾಧಿಕಾರಿ ಮದುಸೂದನ್, ಉಪವಲಯ ಅರಣ್ಯಾಧಿಕಾರಿ ಆರ್.ಎಸ್. ಪಾಟೀಲ್, ಅರಣ್ಯ ರಕ್ಷಕ ಜಗದೀಶ್, ಆರೋಗ್ಯ ಸಹಾಯಕ ಸ್ವತಂತ್ರ ರಾವ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.