ಮಂಗಳೂರು, ಮೇ 16 (DaijiworldNews/PY) : ದುಬೈನಿಂದ ಆಗಮಿಸಿದ ಪ್ರಯಾಣಿಕರನ್ನು ಮಂಗಳೂರು ವಿಮಾನ ನಿಲ್ದಾಣದಲ್ಲಿ ಜಿಲ್ಲಾಡಳಿತವು ಸಂಪೂರ್ಣ ಆರೋಗ್ಯ ಸುರಕ್ಷತಾ ಕ್ರಮಗಳನ್ನು ಕೈಗೊಂಡು ಪ್ರಯಾಣಿಕರನ್ನು ಬರಮಾಡಿಕೊಂಡಿರುವ ಕಾರಣ ಮತ್ತು ವಿಮಾನ ನಿಲ್ದಾಣಕ್ಕೆ ಸಾರ್ವಜನಿಕರು, ಪ್ರಯಾಣಿಕರ ಕುಟುಂಬಸ್ಥರಿಗೆ ಬರಲು ಅವಕಾಶ ನೀಡದೇ ಇದ್ದ ಕಾರಣ ಕೊರೊನಾ ದ್ವಿತೀಯ ಸಂಪರ್ಕ ಹರಡುವುದನ್ನು ತಪ್ಪಿಸುವಲ್ಲಿ ಯಶಸ್ವಿಯಾಗಿದೆ.
ದೇಶದ ಕೆಲವು ವಿಮಾನ ನಿಲ್ದಾಣಗಳಲ್ಲಿ ಆಗಮಿಸಿದ ಪ್ರಯಾಣಿಕರನ್ನು ಕುಟುಂಬಸ್ಥರಿಗೆ ಭೇಟಿ ಮಾಡಲು ಅವಕಾಶ ಕಲ್ಪಿಸಲಾಗಿತ್ತು. ಆದರೆ. ಅಂತಹ ಅವಕಾಶವನ್ನು ಮಂಗಳೂರಿನಲ್ಲಿ ನೀಡಲಿಲ್ಲ. ಅಲ್ಲದೇ, ಕ್ವಾರಂಟೈನ್ ಕೇಂದ್ರಗಳಿಗೆ ಯಾರಿಗೂ ಪ್ರವೇಶಕ್ಕೆ ಅವಕಾಶವಿರಲಿಲ್ಲ.
ಮುಂಜಾಗ್ರತಾ ಕ್ರಮವಾಗಿ ವಿಮಾನ ನಿಲ್ದಾಣಗಳಲ್ಲಿದ್ದ ಹೆಚ್ಚುವರಿ ಸಿಬ್ಬಂದಿ, ಪೊಲೀಸರು, ಭದ್ರತಾ ಪಡೆಯವರನ್ನು ಕೂಡಾ ದೂರ ಇರಿಸಲಾಗದ್ದು, ಮಾಧ್ಯಮದವರಿಗೂ ಪ್ರವೇಶ ಮಾಡಲು ಅವಕಾಶವಿರಲಿಲ್ಲ. ವಾರ್ತಾ ಇಲಾಖೆಯ ಓರ್ವ ಛಾಯಾಚಿತ್ರಗ್ರಾಹಕ ಪಿಪಿಇ ಕಿಟ್ ಅನ್ನು ಧರಿಸಿ ದೂರದಲ್ಲಿ ನಿಂತು ಚಿತ್ರೀಕರಣ ಮಾಡಿದ್ದರು. ಕನಿಷ್ಠ ಪ್ರಮಾಣದಲ್ಲಿ ಜಿಲ್ಲಾಡಳಿತ ಮತ್ತು ಆರೋಗ್ಯ ಇಲಾಖೆಯ ಅಧಿಕಾರಿಗಳು ಪಾಲ್ಗೊಂಡಿದ್ದರಿಂದ ಕೊರೊನಾ ಹರಡುವುದನ್ನು ತಡೆದಂತಾಗಿದೆ ಎನ್ನಲಾಗಿದೆ.
ದ.ಕ. ಜಿಲ್ಲಾ ಆರೋಗ್ಯಾಧಿಕಾರಿ ಡಾ.ರಾಮಚಂದ್ರ ಬಾಯರಿ ಅವರು ಮಾತನಾಡಿ, ಜಿಲ್ಲಾಡಳಿತ ಹಾಗೂ ಆರೋಗ್ಯ ಇಲಾಖೆಯ ಅಧಿಕಾರಿಗಳು ವಿಮಾನ ನಿಲ್ದಾಣದಲ್ಲಿ ಸಾಮಾಜಿಕ ಅಂತರ ಕಾಯ್ದುಕೊಂಡಿದ್ದರು. ಅಲ್ಲದೇ, ತಮ್ಮನ್ನು ತಾವು ರಕ್ಷಿಸಿಕೊಳ್ಳುವ ಸಲುವಾಗಿ ಆರೋಗ್ಯ ಸುರಕ್ಷಾ ಕವಚ ಧರಿಸಿ ಎಚ್ಚರಿಕೆ ವಹಿಸಿದ್ದೇವೆ. ಹಾಗಾಗಿ, ಅಲ್ಲಿ ಕಾರ್ಯನಿರ್ವಹಿಸಿದ್ದ ಯಾರೂ ಕೂಡಾ ಕ್ವಾರಂಟೈನ್ ಆಗಬೇಕಾದ ಅವಶ್ಯಕತೆಯಿಲ್ಲ ಎಂದು ತಿಳಿಸಿದರು.
ದುಬೈನಿಂದ ವಿಮಾನದಲ್ಲಿ 179 ಮಂದಿ ಪ್ರಯಾಣಿಕರು ಆಗಮಿಸಿದ್ದು, ಯಾವ ಪ್ರದೇಶಗಳಿಂದ ಅವರು ಬಂದಿದ್ದಾರೆ ಹಾಗೂ ಅಲ್ಲಿ ಕೊರೊನಾ ಪರೀಕ್ಷೆಗೆ ಒಳಪಟ್ಟಿದ್ದಾರೆಯೇ ಎಂಬ ಮಾಹಿತಿ ಇಲ್ಲ ಎಂದು ದ.ಕ. ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್ ತಿಳಿಸಿದ್ದಾರೆ.
ಕೊರೊನಾ ಪಾಸಿಟಿವ್ ಕಂಡುಬಂದವರ ಆಸನದ ಪಕ್ಕ ಕುಳಿತುಕೊಂವರ ಮೇಲೆ ವಿಶೇಷ ನಿಗಾ ವಹಿಸಲಾಗುವುದು. ಮುಂದಿನ 12 ದಿನಗಳ ನಂತರ ಪುನಃ ಎಲ್ಲರಿಗೂ ಕೊರೊನಾ ಪರೀಕ್ಷೆ ಮಾಡಲಾಗುವುದು. ದುಬೈನಿಂದ ಆಗಮಿಸಿರುವ ಕನ್ನಡಿಗರು ವಿವಿಧ ಹೊಟೇಲ್ ಸೇರಿದಂತೆ 10 ಕ್ವಾರಂಟೈನ್ ಕೇಂದ್ರಗಳಲಿದ್ದು, ಅವರು ಕ್ವಾರಂಟೈನ್ ನಿಯಮಗಳನ್ನು ಪಾಲಿಸುವಂತೆ ಕ್ರಮ ತೆಗೆದುಕೊಳ್ಳಲಾಗಿದೆ. ಇನ್ನೂ ಪ್ರತೀ ಕ್ವಾರಂಟೈನ್ ಕೇಂದ್ರಕ್ಕೆ ಒಬ್ಬ ನೋಡಲ್ ಅಧಿಕಾರಿ ಮತ್ತು ಕೇಂದ್ರದ ಸಿಬ್ಬಂದಿಗೆ ತರಬೇತಿಯನ್ನು ನೀಡಿ ಅದರೊಂದಿಗೆ ಮುಂಜಾಗ್ರತಾ ಕ್ರಮಗಳನ್ನು ಪಾಲಿಸುವಂತೆ ಸೂಚನೆ ನೀಡಲಾಗಿದೆ. ಅಲ್ಲದೇ ಸಿಸಿಟಿವಿ ಕಣ್ಗಾವಲು ಇದೆ ಎಂದರು.