ಮಂಗಳೂರು, ಮೇ 16 (DaijiworldNews/PY) : ಕೊರೊನಾದಿಂದ ದ.ಕ ಜಿಲ್ಲೆಯಲ್ಲಿ ಐದು ಸಾವು ಆಗಿದೆ. ಜಿಲ್ಲಾಡಳಿತ ಇದನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ದ.ಕ ಜಿಲ್ಲಾಡಳಿತ ದ ವಿರುದ್ಧ ಮಾಜಿ ಸಚಿವ ಯು.ಟಿ ಖಾದರ್ ಆರೋಪಿಸಿದ್ದಾರೆ.
ಮಂಗಳೂರಿನಲ್ಲಿ ಈ ವಿಚಾರವಾಗಿ ಮಾತನಾಡಿದ ಅವರು, ಕೊರೊನಾ ಪಾಸಿಟಿವ್ ಆದ ಮೂರು ದಿನದಲ್ಲಿ ಸಾಯುತ್ತಾರೆ. ಮಂಗಳೂರಿನಲ್ಲಿ ಜನರ ಜೀವಕ್ಕೆ ಬೆಲೆ ಇಲ್ವಾ. ಇಂತಹ ಗಂಭೀರವಾದ ವಿಷಯವನ್ನು ಜಿಲ್ಲಾಡಳಿತ ತಮಾಷೆಯಾಗಿ ತೆಗೆದುಕೊಳ್ಳಬಾರದು. ಜನರು ಸಾವುಗೀಡಾಗಿರುವುದಕ್ಕೆ ಕಾರಣ ಏನು? ಈ ಬಗ್ಗೆ ಆರೋಗ್ಯ ಇಲಾಖೆ ತನಿಖೆ ಮಾಡಲಿ ಎಂದು ತಿಳಿಸಿದ್ದಾರೆ.
ಒಬ್ಬ ಸೋಂಕಿತ ಸಾವನ್ನಪ್ಪಿದರೆ 150 ಜನರಿಗೆ ಸೋಂಕು ತಗುಲುತ್ತದೆ. ಇದು ವೈದ್ಯಕೀಯ ಅಧ್ಯಯನದಿಂದ ದೃಢಪಟ್ಟಿದೆ. ದ.ಕ ಜಿಲ್ಲೆಯ ಕೊರೊನಾ ಮೂಲವನ್ನೇ ಪತ್ತೆ ಹಚ್ಚಲು ಆಗಲಿಲ್ಲ. ಯಾವುದೇ ವಿಚಾರದ ಬಗ್ಗೆ ಜಿಲ್ಲಾಡಳಿತದಲ್ಲಿ ಸ್ಪಷ್ಟತೆ ಇಲ್ಲ. ಜನರಿಗೆ ಕಿಟ್ ಕೊಡುವುದರಿಂದ ವೈರಸ್ ಹೋಗುವುದಿಲ್ಲ. ಜಿಲ್ಲಾಡಳಿತವು ವೈರಸ್ ನಿಯಂತ್ರಣಕ್ಕೆ ಕ್ರಮಕೈಗೊಂಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೇಂದ್ರ ಸರ್ಕಾರದ 20 ಲಕ್ಷ ಕೋಟಿ ರೂಪಾಯಿ ಪ್ಯಾಕೇಜ್ ವಿಚಾರದ ಬಗ್ಗೆ ಮಾತನಾಡಿದ ಅವರು, ಎಲ್ಲಾ ದೇಶಗಳಂತೆ ಭಾರತದಲ್ಲೂ ಪ್ಯಾಕೇಜ್ ಘೋಷಣೆ ಮಾಡಿದ್ದಾರೆ. ರೈತನಿಗೆ ಸಾಲ ಜಾಸ್ತಿಯೇ ಹೊರತು ಬಡ್ಡಿ ಮನ್ನಾ ಮಾಡಲಿಲ್ಲ. ಅವತ್ತು ಪ್ರತಿಯೊಬ್ಬರ ಖಾತೆಗೆ 15 ಲಕ್ಷ ಹಾಕುವುದಾಗಿ ಹೇಳಿದ್ರಿ, ಈಗ ಪ್ರತಿಯೊಬ್ಬರ ಖಾತೆಗೆ 15 ಸಾವಿರ ರೂಪಾಯಿ ಹಾಕಿ. ಆಗ ಎರಡೂ ಮಾತು ಉಳಿಸಿಕೊಂಡ ರೀತಿ ಆಗುತ್ತದೆ. ರಾಜ್ಯ ಸರ್ಕಾರವು ಹೊಸ ಯೋಜನೆಯನ್ನು ಘೋಷಣೆ ಮಾಡಿಲ್ಲ. ಮೀನುಗಾರಿಕೆ ಹಾಗೂ ನೇಕಾರರಿಗೆ ಹಳೆಯ ಯೋಜನೆಯನ್ನೇ ಮತ್ತೊಮ್ಮೆ ಪ್ರಕಟಿಸಿದ್ದಾರೆ. ಎಂದು ತಿಳಿಸಿದರು.
ವಂದೇ ಭಾರತ್ ಮಿಷನ್ನಲ್ಲಿ ಮಂಗಳೂರು ವಿಮಾನ ನಿಲ್ದಾಣ ನಿರ್ಲಕ್ಷ್ಯವಾಗಿದೆ. ಡಿ.ವಿ.ಸದಾನಂದ ಗೌಡರ ಮುತುವರ್ಜಿಯಿಂದ ಕೇವಲ ಒಂದೇ ವಿಮಾನ ಬಂದಿದೆ. ಕೇರಳದ ಕಣ್ಣೂರು ವಿಮಾನ ನಿಲ್ದಾಣಕ್ಕೆ ಹತ್ತಾರು ವಿಮಾನ ಬರುತ್ತಿದೆ. ಯಾವುದೇ ರಾಷ್ಟ್ರದಿಂದ ಮಂಗಳೂರಿಗೆ ವಿಮಾನ ಬರುತ್ತಿಲ್ಲ.ಈ ಕೆಲಸವನ್ನು ದ.ಕ ಸಂಸದರಿಗೆ ಕೂತಲ್ಲಿಯೇ ಮಾಡಬಹುದು. ಆದರೆ ಸಂಸದ ಕಟೀಲ್ ಕಿಟ್ ಕೊಡುವುದರಲ್ಲಿ ಬ್ಯುಸಿ ಇದ್ದಾರೆ. ಕಾರ್ಪೋರೆಟರ್ ಮಾಡುವ ಕೆಲಸವನ್ನು ಸಂಸದರು ಮಾಡುತ್ತಿದ್ದಾರೆ. ಮಂಗಳೂರಿಗೆ ವಿಮಾನ ಕಡಿಮೆ ಸಂಖ್ಯೆಯಲ್ಲಿ ಬಂದರೆ ಅದಕ್ಕೆ ಸಂಸದರ ನಿರ್ಲಕ್ಷ್ಯ ವೇ ಕಾರಣ ಎಂದು ಆರೋಪಿಸಿದ್ದಾರೆ.