ಉಡುಪಿ, ಮೇ 16 (DaijiworldNews/PY) : ಕೊರೊನಾ ಸೋಂಕು ಶಂಕಿತ ವ್ಯಕ್ತಿಗಳ ಗಂಟಲು ದ್ರವದ ಮಾದರಿಗಳ ಪರೀಕ್ಷೆಗಾಗಿ ಮಣಿಪಾಲದ ಕೆಎಂಸಿ ಆಸ್ಪತ್ರೆಯಲ್ಲಿ ಪ್ರಯೋಗಾಲಯದ ಆರಂಭಕ್ಕೆ ಕೇಂದ್ರ ಸರ್ಕಾರ ಕೊನೆಗೂ ಅನುಮತಿ ನೀಡಿದೆ.
ಈಗಾಗಲೇ ಕೆಎಂಸಿಯಲ್ಲಿ ಸುಸಜ್ಜಿತವಾದ, ಅತ್ಯಂತ ಆಧುನಿಕವಾದ ವೈರಾಲಜಿ ಪರೀಕ್ಷಾ ಪ್ರಯೋಗಾಲಯವಿದ್ದು, ಇದರಲ್ಲಿ ಕೊರೊನಾ ವೈರಸ್ನ ಪರೀಕ್ಷೆ ಮಾಡಲು ಇದೀಗ ಇಂಡಿಯನ್ ಕೌನ್ಸಿಲ್ ಫಾರ್ ಮೆಡಿಕಲ್ ರಿಸರ್ಚ್ ಅನುಮತಿ ನೀಡಿದೆ. ಐಸಿಎಂಆರ್ನಿಂದ ಕಳೆದ ಗುರುವಾರ ಅಧಿಕೃತವಾದ ಪರವಾನಿಗೆ ಪತ್ರ ಬಂದಿದೆ ಎಂದು ಕೆಎಂಸಿಯ ವೈದ್ಯಕೀಯ ಅಧೀಕ್ಷಕ ಡಾ.ಅವಿನಾಶ್ ಶೆಟ್ಟಿ ಹೇಳಿದ್ದಾರೆ.
ಈಗಾಗಲೇ ನಮ್ಮಲ್ಲಿ ಸುಸಜ್ಜಿತವಾದ ಪ್ರಯೋಗಾಲಯವಿದೆ. ಕೆಲವು ಉಪಕರಣಗಳನ್ನು ಕೊರೊನಾ ಚಿಕಿತ್ಸೆಗಾಗಿ ಜೋಡಿಸಿಕೊಳ್ಳಬೇಕು. ಆದ್ದರಿಂದ ಈ ಪ್ರಯೋಗಾಲಯವು ಮುಂದಿನ ಸೋಮವಾರ-ಮಂಗಳವಾರದ ಸುಮಾರಿಗೆ ಕಾರ್ಯಾರಂಭವಾಗಲಿದೆ. ಅರ್ಧದಿನದೊಳಗೆ ಇಲ್ಲಿ ಫಲಿತಾಂಶ ಪಡೆಯಲು ಸಾಧ್ಯವಿದೆ ಎಂದರು.
ಉಡುಪಿ ಜಿಲ್ಲೆಯ ಎಲ್ಲಾ ಕೊರೊನಾ ಶಂಕಿತ ಮಾದರಿಗಳನ್ನು ಇನ್ನು ಮುಂದೆ ಇಲ್ಲೇ ಪರೀಕ್ಷೆಗೆ ಒಳಪಡಿಸಿ. ಅದೇ ದಿನ ಇಲ್ಲವೃ ಮರುದಿನದ ಒಳಗಾಗಿ ಫಲಿತಾಂಶವನ್ನು ಪಡೆದುಕೊಳ್ಳಲು ಸಾಧ್ಯವಿದೆ. ಈವರೆಗೆ ಇಲ್ಲೆಯ ಸ್ಯಾಂಪಲ್ಗಳನ್ನು ಬೆಂಗಳೂರು, ಹಾಸನ, ಶಿವಮೊಗ್ಗ ಹಾಗೂ ಇತ್ತೀಚೆಗೆ ಮಂಗಳೂರಿಗೆ ಕಳುಹಿಸಬೇಕಾಗುವ ಅವಶ್ಯಕತೆ ಇತ್ತು. ಹಾಗಾಗಿ ವರದಿಗಳು ಕೈಸೇರಲು 3-4 ದಿನಗಳು ಬೇಕಾಗುತ್ತಿದ್ದವು.
ಕೆಎಂಸಿ ಆಸ್ಪತ್ರೆಯಲ್ಲಿ ಪ್ರಯೋಗಾಲಯದ ಪ್ರಾರಂಭಕ್ಕೆ ಎರಡು ತಿಂಗಳ ಹಿಂದೆ ಐಸಿಎಂಆರ್ ಅನುಮತಿ ನೀಡಿತ್ತು. ಆದರೆ, ಕಾರಣಾಂತರಗಳಿಂದ ಅದನ್ನು ಕೇವಲ ಎರಡು ದಿನಗಳಲ್ಲೇ ಹಿಂದಕ್ಕೆ ಪಡೆಯಲಾಗಿತ್ತು.
ಈ ಮಧ್ಯೆ ಅಜ್ಜರಕಾಡಿನಲ್ಲಿರುವ ಜಿಲ್ಲಾಸ್ಪತ್ರೆಯ ಆವರಣದಲ್ಲಿ ಕೊರೊನಾ ಪರೀಕ್ಷೆ ಮಾಡಲು ಸುಸಜ್ಜಿತ ಪ್ರಯೋಗಾಲಯದ ಆರಂಭಕ್ಕೆ ರಾಜ್ಯ ಆರೋಗ್ಯ ಇಲಾಖೆ ಸಿದ್ದತೆ ನಡೆಸುತ್ತಿದೆ. ಈ ಪ್ರಯೋಗಾಲಯವೂ ಈ ತಿಂಗಳ ಕೊನೆಯೊಳಗೆ ಕಾರ್ಯಾರಂಭಿಸುವ ನಿರೀಕ್ಷೆ ಇದೆ ಎಂದು ಜಿಲ್ಲಾಸ್ಪತ್ರೆಯ ಮೂಲಗಳು ತಿಳಿಸಿವೆ.