ಮಂಗಳೂರು, ಮೇ 16 (Daijiworld News/MSP): ಆಸ್ಪತ್ರೆಯ ವಿರುದ್ಧ ಸಾಮಾಜಿಕ ಮಾಧ್ಯಮಗಳಲ್ಲಿ ಸುಳ್ಳು ಸುದ್ದಿ ಹರಡುತ್ತಿರುವ ಬಗ್ಗೆ ಎ.ಜೆ ಆಸ್ಪತ್ರೆ ಯ ಮಂಡಳಿ ಮೇ.16 ರ ಶನಿವಾರ ನಗರ ಸೈಬರ್ ಅಪರಾಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದೆ.
"ಪೋಸ್ಟ್ಮ್ಯಾನ್ " ಎಂಬ ಹೆಸರಿನ ಫೇಸ್ಬುಕ್ ಪೇಜ್ ನಲ್ಲಿ 40 ಕ್ಕೂ ಹೆಚ್ಚು ಕೊರೊನಾ ವೈರಸ್-ಪಾಸಿಟಿವ್ ರೋಗಿಗಳು ಎಜೆ ಆಸ್ಪತ್ರೆಯಲ್ಲಿದ್ದಾರೆ ಎಂದು ಸುಳ್ಳು ಸುದ್ದಿ ಹರಡುತ್ತಿದ್ದು, ವಾಟ್ಸಾಪ್ನಲ್ಲೂ ಅದೇ ಫಾರ್ವರ್ಡ್ ಮಾಡಲಾಗುತ್ತಿದೆ ಎಂದು ದೂರು ದಾಖಲಿಸಲಾಗಿದೆ.
ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ.ಪ್ರಶಾಂತ್ ಮಾರ್ಲಾ ಅವರು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ್ದು, " ಸಾಮಾಜಿಕ ಜಾಲತಾಣಗಳಲ್ಲಿ ಎಜೆ ಆಸ್ಪತ್ರೆಯಲ್ಲಿ 40 ಕ್ಕೂ ಹೆಚ್ಚು ಕೊರೊನಾ ವೈರಸ್-ಪಾಸಿಟಿವ್ ರೋಗಿಗಳಿದ್ದಾರೆ ಎಂದು ವದಂತಿ ಹರಡಲಾಗುತ್ತಿದೆ.
ಸಾಂಕ್ರಮಿಕ ರೋಗದ ಬಿಕ್ಕಟ್ಟಿನ ಸಂದರ್ಭದಲ್ಲಿ ಸರ್ಕಾರ ಮತ್ತು ಪೊಲೀಸ್ ಇಲಾಖೆಯೊಂದಿಗೆ ಕೊವೀಡ್ ಯೋಧರಾಗಿರುವ ಆರೋಗ್ಯ ಕಾರ್ಯಕರ್ತರು ಪ್ರತಿಕೂಲ ಪರಿಸ್ಥಿತಿಗಳು ಕೈಜೋಡಿಸಿ ರೋಗದ ವಿರುದ್ದ ಹೋರಾಡುವ ಕೆಲಸ ಮಾಡುತ್ತಿದ್ದಾರೆ.
ಇಂತಹ ಸಂದಿಗ್ದ ಪರಿಸ್ಥಿತಿಯಲ್ಲಿ ಮುಂಚೂಣಿಯಲ್ಲಿ ಹೋರಾಡುತ್ತಿರುವ ಆರೋಗ್ಯ ಯೋಧರನ್ನು ಬೆಂಬಲಿಸುವುದು ಮತ್ತು ಅವರಿಗೆ ಧೈರ್ಯವನ್ನು ನೀಡುವುದು ಪ್ರತಿಯೊಬ್ಬ ವ್ಯಕ್ತಿಯ ಜವಾಬ್ದಾರಿಯಾಗಿದೆ, ಮಾಧ್ಯಮಗಳು ಅವರ ಸ್ಥೈರ್ಯವನ್ನು ಹೆಚ್ಚಿಸುವಲ್ಲಿ ದೊಡ್ಡ ಪಾತ್ರವನ್ನು ವಹಿಸುತ್ತವೆ. ಆದರೆ ಕೆಲವು ದುಷ್ಕರ್ಮಿಗಳು ಸಾಮಾಜಿಕ ಮಾಧ್ಯಮದಲ್ಲಿ ಸುಳ್ಳು ಸುದ್ದಿಗಳನ್ನು ಹರಡುತ್ತಿರುವುದು ವಿಷಾದಕರವಾಗಿದೆ.
ನಮ್ಮ ಆಸ್ಪತ್ರೆಯಲ್ಲಿ 40 ಕ್ಕೂ ಹೆಚ್ಚು ಕೊರೊನಾ ಸೋಂಕಿತರು ರೋಗಿಗಳು ಇದ್ದಾರೆ ಎಂದು ವದಂತಿ ಹರಡಲಾಗುತ್ತಿದ್ದು ಇದು ಆಧಾರರಹಿತವಾಗಿದ್ದು ಸತ್ಯಕ್ಕೆ ದೂರವಿದೆ. ಸರ್ಕಾರ ಪ್ರತಿದಿನ ತನ್ನ ಕೊರೊನಾ ಸಂಬಂಧಿಸಿದ ಬುಲೆಟಿನ್ ಬಿಡುಗಡೆ ಮಾಡುತ್ತದೆ. ಹೀಗಾಗಿ ಸತ್ಯವಿಚಾರ ಎಲ್ಲರಿಗೂ ತಿಳಿದಿರುವಂತದ್ದು. ರೋಗಿ ಸಂಖ್ಯೆ -1009 ಅವರಿಗೆ ಚಿಕಿತ್ಸೆ ನೀಡಿದ ಸಂದರ್ಭ ಸರ್ಕಾರ ಮಾರ್ಗಸೂಚಿಗಳನ್ನು ಅನುಸರಿಸಲಾಗಿತ್ತು ಅಲ್ಲದೆ ರೋಗಿಗೆ ಚಿಕಿತ್ಸೆ ನೀಡುವ ಸಂದರ್ಭ ನಮ್ಮ ಆಸ್ಪತ್ರೆಯಲ್ಲಿ ಪಿಪಿಇ ಕಿಟ್ ಧರಿಸಿಯೇ ಚಿಕಿತ್ಸೆ ನೀಡಲಾಗುತ್ತದೆ. ಅದಾಗ್ಯೂ ಮುನ್ನೆಚ್ಚರಿಕಾ ಕ್ರಮವಾಗಿ (ಪಿ -1009) ಅವರ ಚಿಕಿತ್ಸೆ ವೇಳೆ ಇದ್ದಂತಹ 25 ಸಿಬ್ಬಂದಿಯನ್ನು ಅಬ್ಸರ್ವೇಶನ್ ನಲ್ಲಿ ಇರಿಸಲಾಗಿದೆಯಷ್ಟೇ ಇವರ್ಯಾರಿಗೂ ಕೊರೊನಾ ಪಾಸಿಟಿವ್ ಬಂದಿಲ್ಲ.
ಕೇವಲ ಚಪ್ಪಾಳೆ, ದೀಪ ಬೆಳಗುವುದು, ಗಂಟೆ ಬಾರಿಸುವುದರ ಮೂಲಕ ಕೋವಿಡ್ ಯೋಧರ ಪ್ರಯತ್ನವನ್ನು ಪ್ರಶಂಸಿಸುವುದು ಸಾಕಾಗುವುದಿಲ್ಲ, ಆರೋಗ್ಯ ಯೋಧರನ್ನು ದೂಷಿಸುವ ಬದಲು ಬೆಂಬಲಿಸಿ" ಎಂದು ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮೇ 12 ರಂದು ಹೃದಯ ಸಂಬಂಧಿ ಖಾಯಿಲೆಯಿಂದ ಬಳಲುತ್ತಿದ್ದ ಸುರತ್ಕಲ್ ಮಹಿಳೆಗೆ ಎಜೆ ಆಸ್ಪತ್ರೆಯ ಚಿಕಿತ್ಸೆಗಾಗಿ ಬಂದ ಸಂದರ್ಭ ತುರ್ತು ವಿಭಾಗದಲ್ಲಿ ಚಿಕಿತ್ಸೆ ನೀಡಿ ಐಷೋಲೇಶನ್ ಐಸಿಯುಗೆ ಸ್ಥಳಾಂತರಿಸಿ ಸರ್ಕಾರದ ಎಲ್ಲಾ ಮಾರ್ಗಸೂಚಿಗಳನ್ನು ಪ್ರಕಾರ ರೋಗಿಯ ಗಂಟಲಿನ ಸ್ವ್ಯಾಬ್ ಅನ್ನು ಸರ್ಕಾರಿ ವೆನ್ಲಾಕ್ ಆಸ್ಪತ್ರೆಗೆ ಕಳುಹಿಸಲಾಗಿತ್ತು, ವರದಿ ಕೊರೊನಾ ಪಾಸಿಟಿವ್ ಬಂದ ತಕ್ಷಣ , ಪ್ರೋಟೋಕಾಲ್ ಪ್ರಕಾರ ರೋಗಿಯನ್ನು ಮೇ 15 ರಂದು ಸರ್ಕಾರಿ ವೆನ್ಲಾಕ್ ಆಸ್ಪತ್ರೆಗೆ ವರ್ಗಾಯಿಸಲಾಗಿತ್ತು.