ಕಾಸರಗೋಡು, ಮೇ 16 (DaijiworldNews/SM): ಈಗಾಗಲೇ ಕೇರಳ ಸರಕಾರ ಹೊರಡಿಸಿರುವ ಆದೇಶದಂತೆ ಮೇ 17ರ ರವಿವಾರದಂದು ಕೇರಳದಲ್ಲಿ ಸಂಪೂರ್ಣ ಲಾಕ್ ಡೌನ್ ಆಗಿರಲಿದ್ದು, ಕಾಸರಗೋಡು ಸಂಪೂರ್ಣ ಸ್ತಬ್ದಗೊಳ್ಳಲಿದೆ.
ಈ ಕುರಿತಂತೆ ಈಗಾಗಲೇ ಜಿಲ್ಲಾಡಳಿತ ಹಾಗೂ ಕೇರಳ ಸರಕಾರ ತಮ್ಮ ಆದೇಶಗಳನ್ನು ಹೊರಡಿಸಿವೆ. ವಾರದ ಆರು ದಿನಗಳ ಕಾಲ ಜನರಿಗೆ ಅಗತ್ಯ ಸೇವೆಗಳಿಗಾಗಿ ಅವಕಾಶ ನೀಡಲಾಗಿದೆ. ಆದರೆ, ರವಿವಾರ ಸಂಪೂರ್ಣ ಬಂದ್ ಮಾಡುವ ನಿರ್ಧಾರ ಈ ಹಿಂದೆಯೇ ಕೈಗೊಳ್ಳಲಾಗಿತ್ತು. ರವಿವಾರದಂದು ಜನಸಾಮಾನ್ಯರ ಓಡಾಟ ಹೆಚ್ಚಾಗಿರುತ್ತದೆ. ಈ ಹಿನ್ನೆಲೆಯಲ್ಲಿ ಜನರನ್ನು ನಿಯಂತ್ರಿಸಲು ಹಾಗೂ ಕೊರೊನಾ ಸೋಂಕು ಹರಡದಂತೆ ತಡೆಯುವ ಉದ್ದೇಶದಿಂದ ಕೇರಳ ಸರಕಾರ ಈ ನಿರ್ಧಾರ ಕೈಗೊಂಡಿದೆ.
ಈಗಾಗಲೇ ಮೇ 10ರ ರವಿವಾರದಂದು ಸಂಪೂರ್ಣ ಲಾಕ್ ಡೌನ್ ಮಾಡಲಾಗಿದ್ದು, ಜನರು ಸಂಪೂರ್ಣ ಸಹಕಾರ ನೀಡಿದ್ದರು. ಮನೆಯಲ್ಲಿದ್ದುಕೊಂಡು ಸರಕಾರದ ಆದೇಶವನ್ನು ಗೌರವಿಸಿದ್ದರು. ಇದೀಗ ಈ ರವಿವಾರವೂ ಸರಕಾರ ಲಾಕ್ ಡೌನ್ ಆದೇಶ ನೀಡಿದ್ದು ಕಾಸರಗೋಡಿನಲ್ಲಿ ಜನ ಸಂಪೂರ್ಣ ಸಹಕಾರ ನೀಡಲಿದ್ದಾರೆ.