ಉಡುಪಿ, ಮೇ 16 (DaijiworldNews/SM): ಕೊರೊನಾ ಮುಕ್ತಗೊಂಡು ಗ್ರೀನ್ ಝೋನ್ ನಲ್ಲಿದ್ದ ಉಡುಪಿ ಜಿಲ್ಲೆಗೆ ಮತ್ತೆ ಕಿಲ್ಲರ್ ಕೊರೊನಾ ಕಾಡಿದ್ದು, ಏಳು ಪಾಸಿಟಿವ್ ಪ್ರಕರಣ ದೃಢಪಟ್ಟ ಬೆನ್ನಲ್ಲೇ ಇದೀಗ ಮೊದಲ ಸಾವು ಸಂಭವಿಸಿದೆ. ಮಹಾರಾಷ್ಟ್ರದಿಂದ ಬಂದ ಕುಂದಾಪುರ ಮೂಲದ 54 ವರ್ಷದ ವ್ಯಕ್ತಿ ಕ್ವಾರಂಟೈನ್ ನಲ್ಲಿದ್ದ ಸಂದರ್ಭ ಇಂದು ಬೆಳಗ್ಗೆ ಹೃದಯಾಘಾತದಿಂದ ಮೃತಪಟ್ಟಿದ್ದು, ಇದೀಗ ಮೃತ ವ್ಯಕ್ತಿಯಲ್ಲಿ ಕೊರೊನಾ ಪಾಸಿಟಿವ್ ದೃಢಪಟ್ಟಿದೆ.
ಮಹಾರಾಷ್ಟ್ರದಿಂದ ಬಂದಿದ್ದ ವ್ಯಕ್ತಿ ಮೇ 13ರ ಸಂಜೆ ಹೃದಯಾಘಾತವಾಗಿ ಕಸ್ತೂರ್ಬಾ ಆಸ್ಪತ್ರೆ ಮಣಿಪಾಲಕ್ಕೆ ದಾಖಲಾಗಿದ್ದರು. ಆದರೆ ಬಳಿಕ ಅವರು ಮೃತಪಟ್ಟಿದ್ದರು. ಅವರ ಗಂಟಲ ದ್ರವ ಮಾದರಿಯನ್ನು ಪರೀಕ್ಷೆಗೆ ಕಳುಹಿಸಲಾಗಿತ್ತು. ಶನಿವಾರ ಸಂಜೆ ಪರೀಕ್ಷಾ ವರದಿ ಲಭ್ಯವಾಗಿದ್ದು, ಕೊರೊನಾ ಪಾಸಿಟಿವ್ ದೃಢಪಟ್ಟಿದೆ.
ಆ ವ್ಯಕ್ತಿಗೆ ಉಸಿರಾಟದ ತೊಂದರೆ ಇದ್ದ ಕಾರಣ ಐಸೋಲೇಷನ್ ವಾರ್ಡಿನಲ್ಲಿ ಚಿಕಿತ್ಸೆ ನೀಡಲಾಗಿತ್ತು. ವ್ಯಕ್ತಿ ಆಸ್ಪತ್ರೆಗೆ ದಾಖಲಾದ ದಿನದಿಂದ ಸರಕಾರದ ಮಾರ್ಗಸೂಚಿಯಂತೆ ಎಲ್ಲಾ ಅಗತ್ಯ ಮುಂಜಾಗೃತಾ ಕ್ರಮಗಳನ್ನು ಕೈಗೊಂಡು ಚಿಕಿತ್ಸೆ ಕೊಡಲಾಗಿತ್ತು. ಆತನ ಗಂಟಲದ್ರವ ಸಂಗ್ರಹಿಸಿ ಪರೀಕ್ಷೆಗೆ ರವಾನಿಸಲಾಗಿತ್ತು. ಅದರ ವರದಿ ಲಭ್ಯವಾಗಿದ್ದು ಕೊರೊನಾ ಪಾಸಿಟಿವ್ ಎಂದು ಇಂದು ದೃಢವಾಗಿದೆ.
ಇನ್ನು ಮುಂಜಾಗೃತಾ ಕ್ರಮವಾಗಿ ಮೃತ ವ್ಯಕ್ತಿಗೆ ಚಿಕಿತ್ಸೆ ನೀಡಿದ ತಂಡದಲ್ಲಿದ್ದ ಕೆಲವೊಂದು ಸಿಬ್ಬಂದಿಗಳನ್ನು ಕ್ವಾರಂಟೈನಿಗೆ ಒಳಪಡಿಸಲಾಗಿದೆ.
ಇನ್ನು ಕೊರೊನಾ ಮುಕ್ತಗೊಂಡು ಗ್ರೀನ್ ಝೋನ್ ವಲಯವಾಗಿದ್ದ ಉಡುಪಿಯಲ್ಲಿ ಇದೀಗ ಕೊರೊನಾದಿಂದ ಮೊದಲ ಸಾವು ಸಂಭವಿಸಿದಂತಾಗಿದೆ.