ಮಂಗಳೂರು, ಮೇ 16 (DaijiworldNews/SM): ಶನಿವಾರದಂದು ದ.ಕ. ಜಿಲ್ಲೆಗೆ ಕೊರೊನಾ ಬಿಗ್ ರಿಲೀಫ್ ಸಿಕ್ಕಿದೆ. ಶನಿವಾರದಂದು ಲಭ್ಯವಾದ ಎಲ್ಲಾ 167 ಮಂದಿಯ ವರದಿ ನೆಗೆಟಿವ್ ಆಗುವ ಮೂಲಕ ಜಿಲ್ಲೆಯ ಜನತೆಯಲ್ಲಿ ಎದುರಾಗಿದ್ದ ಆತಂಕ ದೂರವಾದಂತಾಗಿದೆ.
ಶುಕ್ರವಾರದಂದು ಜಿಲ್ಲೆಯಲ್ಲಿ ಅತ್ಯಧಿಕ 16 ಮಂದಿಯಲ್ಲಿ ಕೊರೊನಾ ಪಾಸಿಟಿವ್ ದಾಖಲಾಗಿತ್ತು. ಇದರಿಂದಾಗಿ ಜಿಲ್ಲೆಯಲ್ಲಿ ಆತಂಕ ಎದುರಾಗಿತ್ತು. ಒಂದೇ ದಿನ 16 ಪ್ರಕರಣಗಳು ದಾಖಲಾದ ಸಂದರ್ಭದಲ್ಲಿ ಜಿಲ್ಲಾಡಳಿತಕ್ಕೂ ತಲೆನೋವಾಗಿ ಪರಿಣಮಿಸಿತ್ತು. ಆದರೆ, ವಿದೇಶದಿಂದ ಬಂದವರಾದ ಕಾರಣ ಅವರಿಗೆ ಕ್ವಾರಂಟೈನ್ ಮಾಡಲಾಗಿರುವುದರಿಂದ ಒಂದು ಹಂತದಲ್ಲಿ ಸೋಂಕು ಹರಡುವ ಆತಂಕ ಸ್ವಲ್ಪ ಕಡಿಮೆಯಾಗಿತ್ತು.
ಈ ನಡುವೆ ಶನಿವಾರದ ಆರೋಗ್ಯ ಇಲಾಖೆ ಹಾಗೂ ಜಿಲ್ಲಾಡಳಿತದ ವರದಿಯ ಮೇಲೆ ಜಿಲ್ಲೆಯ ಜನತೆಯ ಕಣ್ಣು ನೆಟ್ಟಿತ್ತು. ಶನಿವಾರ ಏನಾಗಬಹುದು ಎನ್ನುವ ಆತಂಕ ಕೆಲವರಲ್ಲಿತ್ತು. ಆದರೆ, ಆರೋಗ್ಯ ಇಲಾಖೆ ಹಾಗೂ ಜಿಲ್ಲಾಡಳಿತದ ವರದಿ ಬಂದ ಬಳಿಕ ಜಿಲ್ಲೆಯ ಜನತೆ ಸ್ವಲ್ಪ ನಿರಾಳರಾಗಿದ್ದಾರೆ. 167 ಮಂದಿಯ ವರದಿ ನೆಗೆಟಿವ್ ಬರುವ ಮೂಲಕ ಎದುರಾಗಿದ್ದ ಆತಂಕದಿಂದ ರಿಲೀಫ್ ಸಿಕ್ಕಂತಾಗಿದೆ.