ಕಾಸರಗೊಡು, ಮೇ 16 (DaijiworldNews/SM): ಜಿಲ್ಲೆಯಲ್ಲಿ ಶನಿವಾರ ಯಾವುದೇ ಕೊರೋನಾ ಪಾಸಿಟಿವ್ ಕೇಸ್ ಗಳಿಲ್ಲ. ಆದರೆ, ಜಿಲ್ಲೆಯಲ್ಲಿ ಒಟ್ಟು 1817 ಮಂದಿ ನಿಗಾದಲ್ಲಿದ್ದಾರೆ. 1555 ಮಂದಿ ಮನೆಗಳಲ್ಲಿ, 262 ಮಂದಿ ಆಸ್ಪತ್ರೆಗಳಲ್ಲಿ ನಿಗಾದಲ್ಲಿದ್ದಾರೆ.
ಶನಿವಾರ ನೂತನವಾಗಿ 61 ಮಂದಿಯನ್ನು ಐಸೊಲೇಷನ್ ವಾರ್ಡಿಗೆ ದಾಖಲಿಸಲಾಗಿದೆ. ಜಿಲ್ಲೆಯಲ್ಲಿ 5510 ಮಂದಿಯ ಸ್ಯಾಂಪಲ್ ತಪಾಸಣೆಗೆ ಕಳುಹಿಸಲಾಗಿದೆ. 4866 ಮಂದಿಯ ಫಲಿತಾಂಶ ನೆಗೆಟಿವ್ ಆಗಿದೆ. 183 ಮಂದಿಯ ಫಲಿತಾಂಶ ನಿರೀಕ್ಷಿಸಲಾಗಿದೆ.
ಕಾಸರಗೋಡು ಜಿಲ್ಲೆಯಿಂದ ಈ ವರೆಗೆ ಶೇ 79.45 ಮಂದಿಗೆ ಪಾಸ್ ಮಂಜೂರು: ಜಿಲ್ಲಾಧಿಕಾರಿ
ಇನ್ನು ಹೊರ ರಾಜ್ಯಗಳಿಂದ ಕೇರಳ ರಾಜ್ಯ ಪ್ರವೇಶ ನಡೆಸುವ ನಿಟ್ಟಿನಲ್ಲಿ ಕಾಸರಗೋಡು ಜಿಲ್ಲೆಯಿಂದ ಈ ವರೆಗೆ ಶೇ 79.45 ಮಂದಿಗೆ ಪಾಸ್ ಮಂಜೂರು ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ತಿಳಿಸಿದ್ದಾರೆ.
ಶನಿವಾರ ಸಂಜೆ ವರೆಗೆ 7617 ಅರ್ಜಿಗಳು ಕಭಿಸಿದ್ದು, 6052 ಮಂದಿಗೆ ಪಾಸ್ ಮಂಜೂರು ಮಾಡಲಾಗಿದೆ. ಈ ಮೂಲಕ ಒಟ್ಟು ಅರ್ಜಿದಾರರಲ್ಲಿ ಶೇ 79.45 ಮಂದಿಗೆ ಪಾಸ್ ಮಂಜೂರಾಗಿದೆ ಎಂದವರು ಹೇಳಿದರು. ಅರ್ಜಿದಾರರಿಗೆ ಕ್ವಾರೆಂಟೈನ್ ಕೇಂದ್ರಗಳ ಲಭ್ಯತೆಗನುಗುಣವಾಗಿ ಪಾಸ್ ವಿತರಣೆ ನಡೆಸಲಾಗುತ್ತಿದೆ. ಒಬ್ಬರು ಅರ್ಜಿ ಸಲ್ಲಿಸಿದ ತಕ್ಷಣವೇ ಆಯಾ ಸ್ಥಳೀಯಾಡಳಿತ ಸಂಸ್ಥೆಗಳ ಪದಾಧಿಕಾರಿಗಳು ಅರ್ಜಿದಾರರ ಮನೆಯಲ್ಲಿ ಯಾ ಸರಕಾರಿ ಕ್ವಾರೆಂಟೈನ್ ಕೇಂದ್ರದಲ್ಲಿ ಸೌಲಭ್ಯವಿದೆಯೇ ಎಂಬ ಬಗ್ಗೆ ಖಚಿತಪಡಿಸಿ, ದಾಖಲು ಪಡಿಸಿ ಉಪಜಿಲ್ಲಾಧಿಕಾರಿ ಅಥವಾ ಹೆಚ್ಚುವರಿ ದಂಡನಾಧಿಕಾರಿಗೆ ವರದಿ ಸಲ್ಲಿಸಲಿದ್ದಾರೆ. ಈ ವರದಿಯ ಹಿನ್ನೆಲೆಯಲ್ಲಿ ಪಾಸ್ ಮಂಜೂರು ಮಾಡಲಾಗುವುದು. ಮಿತಿಗಳಿದ್ದೂ, ಗರಿಷ್ಠ ಮಟ್ಟದಲ್ಲಿ ಪಾಸ್ ಮಂಜೂರು ಮಾಡುವಲ್ಲಿ ಕಾಸರಗೋಡು ಜಿಲ್ಲೆ 6ನೇ ಸ್ಥಾನ ಹೊಂದಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.