ಮಂಗಳೂರು, ಮೇ 17 (DaijiworldNews/SM): ಜಿಲ್ಲೆಯಲ್ಲಿ ರವಿವಾರ ಇಬ್ಬರಲ್ಲಿ ಕೊರೊನಾ ಸೋಂಕು ಪತ್ತೆಯಾದ ಹಿನ್ನೆಲೆಯಲ್ಲಿ, ಜಪ್ಪಿನಮೊಗರುವಿನ ಜಪ್ಪು ಪಟ್ನ ಪ್ರದೇಶವನ್ನು ಸೀಲ್ ಡೌನ್ ಮಾಡಿ ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್ ಆದೇಶ ನೀಡಿದ್ದಾರೆ. ಆದರೆ, ಯೆಯ್ಯಾಡಿ ಪ್ರದೇಶ ಸೀಲ್ ಡೌನ್ ಆಗಿಲ್ಲ.
ರವಿವಾರದಂದು ಜಪ್ಪಿನ ಮೊಗರುವಿನ ಯುವಕ ಹಾಗೂ ಯೆಯ್ಯಾಡಿಯ ಮಹಿಳೆಯಲ್ಲಿ ಸೋಂಕು ಪತ್ತೆಯಾಗಿತ್ತು. ಈ ಪೈಕಿ ಜಪ್ಪಿನ ಮೊಗರುವಿನ ವ್ಯಕ್ತಿ ಊರಿನಲ್ಲೇ ಇದ್ದರು. ಆದರೆ, ಯೆಯ್ಯಾಡಿಯ ಪಾಸಿಟಿವ್ ವ್ಯಕ್ತಿ ಮುಂಬೈನಿಂದ ಬಂದಿದ್ದು, ನೇರವಾಗಿ ಕ್ವಾರಂಟೈನ್ ಗೆ ಒಳಪಟ್ಟ ಕಾರಣ ಯೆಯ್ಯಾಡಿ ಸೀಲ್ ಡೌನ್ ಮಾಡಿಲ್ಲ.
ಯೆಯ್ಯಾಡಿ ಸೀಲ್ ಡೌನ್ ಯಾಕಿಲ್ಲ?
ಸರಕಾರದ ಆದೇಶದ ಪ್ರಕಾರ ಪಾಸಿಟಿವ್ ಕಂಡು ಬಂದ ಪ್ರದೇಶದ 100 ಮೀಟರ್ ಪ್ರದೇಶವನ್ನು ಸೀಲ್ ಡೌನ್ ಮಾಡಲಾಗುತ್ತದೆ. ಹಾಗೂ 5 ಕಿ.ಮೀ. ಪ್ರದೇಶ ಬಫರ್ ಝೋನ್ ಎಂದು ಘೋಷಣೆ ಮಾಡಲಾಗುತ್ತದೆ. ಸೋಂಕಿತ ವ್ಯಕ್ತಿ ಆ ಪ್ರದೇಶದಲ್ಲಿದ್ದರೆ ಮಾತ್ರ ಪ್ರದೇಶವನ್ನು ಸೀಲ್ ಡೌನ್ ಗೊಳಿಸಿ ಜಿಲ್ಲಾಡಳಿತ ಆದೇಶ ನೀಡುತ್ತದೆ. ಆದರೆ, ಯೆಯ್ಯಾಡಿಯ ನಿವಾಸಿ ಯೆಯ್ಯಾಡಿಯ ತನ್ನ ಮನೆಯಲ್ಲಿರಲಿಲ್ಲ. ಮುಂಬೈನಿಂದ ಬಂದವರಾಗಿದ್ದಾರೆ. ಆದ ಕಾರಣ ಅವರನ್ನು ನೇರವಾಗಿ ಸಾಂಸ್ಥಿಕ ಕ್ವಾರಂಟೈನ್ ಗೆ ಒಳಪಡಿಸಲಾಗಿತ್ತು. ಇದರಿಂದಾಗಿ ಈ ಮಹಿಳೆಗೆ ಮನೆಯವರ ಹಾಗೂ ಇತರ ಯಾರದೇ ಸಂಪರ್ಕವಾಗಿಲ್ಲ. ಈ ಕಾರಣದಿಂದಾಗಿ ಯೆಯ್ಯಾಡಿ ಪ್ರದೇಶ ಸೀಲ್ ಡೌನ್ ಮಾಡಿಲ್ಲ.
ಸೀಲ್ ಡೌನ್ ಆಗಿರುವ ಪ್ರದೇಶಗಳ ಮಾಹಿತಿ:
ಪೂರ್ವದಲ್ಲಿ ಕೆನಲ್, ಪಶ್ಚಿಮದಿಂದ ರೈಲ್ವೇ ಟ್ರ್ಯಾಕ್(ಉಳ್ಳಾಲದಿಂದ ಮಂಗಳೂರು ಜಂಕ್ಷನ್), ಉತ್ತರದಲ್ಲಿ ಕ್ಯಾಂಬ್ರಿಡ್ಜ್ ಶಾಲೆ, ದಕ್ಷಿಣದಲ್ಲಿ ಜೆಪ್ಪು ಪಟ್ನ ರೋಡ್ ಪ್ರದೇಶವನ್ನು ಸೀಲ್ ಡೌನ್ ಮಾಡಿ ಆದೇಶ ನೀಡಲಾಗಿದೆ.
ಇನ್ನು ಈ ಪ್ರದೇಶದಲ್ಲಿ 48 ಮನೆಗಳಿವೆ. 3 ಅಂಗಡಿ ಮುಂಗಟ್ಟುಗಳು, ಶಾಲೆ ಕಟ್ಟಡಗಳಿವೆ. ಹಾಗೂ ಸೀಲ್ ಡೌನ್ ಆಗಿರುವ ಪ್ರದೇಶದಲ್ಲಿರುವ ಒಟ್ಟು ಜನ ಸಂಖ್ಯೆ 205.
ಇನ್ನು ಬಫರ್ ಝೋನ್ ಬಗ್ಗೆ ಮಾಹಿತಿ:
ಪೂರ್ವದಿಂದ ಬಜಾಲ್ ಫೈಸಲ್ ನಗರ್, ಪಶ್ಚಿಮದಿಂದ ಅರಬ್ಬಿ ಸಮುದ್ರ, ಉತ್ತರದಿಂದ ಬಿಕರ್ನಕಟ್ಟೆ, ದಕ್ಷಿಣದಲ್ಲಿ ಉಳ್ಳಾಲ ತನಕ ಬಫರ್ ಝೋನ್ ವ್ಯಾಪ್ತಿಗೆ ಒಳಪಡಲಿದೆ. ಇನ್ನು ಈ ಪ್ರದೇಶದಲ್ಲಿ 32,500 ಮನೆಗಳಿವೆ. 983 ಅಂಗಡಿ ಮುಂಗಟ್ಟುಗಳು, ಕಚೇರಿಗಳಿವೆ. 1,45,500 ಮಂದಿ ಈ ಪ್ರದೇಶದಲ್ಲಿ ವಾಸವಾಗಿದ್ದಾರೆ.