ಮಂಗಳೂರು, ಮೇ 18 (Daijiworld News/MSP): ಬಂಗಾಲಕೊಲ್ಲಿ ವಾಯುಭಾರ ಕುಸಿತ ಹಾಗೂ ಅರಬ್ಬಿ ಸಮುದ್ರದಲ್ಲಿ ನಿಮ್ಮ ಒತ್ತಡದ ಪರಿಣಾಮ ಉಂಟಾದ ಅಂಫಾನ್ ಚಂಡಮಾರುತದ ಪರಿಣಾಮ ಜಿಲ್ಲೆಯಾದ್ಯಂತ ಮಳೆ ಸುರಿಯುತ್ತಿದ್ದು ನಗರದಲ್ಲೂ ಭಾನುವಾರ ತಡರಾತ್ರಿಯಿಂದಲೇ ಮಳೆರಾಯ ಆರ್ಭಟಿಸುತ್ತಾನೆ.
ನಗರದಲ್ಲಿ ಸುರಿದ ನಿರಂತರ ಮಳೆಯ ಹಿನ್ನಲೆ ಬೈಕಂಪಾಡಿ ಎಪಿಎಂಸಿ ಮಾರುಕಟ್ಟೆಯಲ್ಲಿ ಮಾರಾಟಗಾರರು ಕಂಗಾಲಾಗಿದ್ದು, ಕೋವಿಡ್ ಹಿನ್ನಲೆಯಲ್ಲಿ ಮೊದಲೇ ವ್ಯಾಪಾರದ ಮೇಲೆ ಪರಿಣಾಮ ಬೀರಿದ್ದು, ಇದೀಗ ಸುರಿದ ಅಕಾಲಿಕ ಮಳೆಯೂ ವ್ಯಾಪಾರಿಗಳನ್ನು ಕಂಗೆಡುವಂತೆ ಮಾಡಿದೆ.
ಸಮರ್ಪಕ ಮಾರುಕಟ್ಟೆ ವ್ಯವಸ್ಥೆಯಿಲ್ಲದೇ ತರಕಾರಿ ಹಣ್ಣು ಹಂಪಲುಗಳ ಸಮೇತ ಮಳೆ ನೀರಿನಲ್ಲಿ ಕೊಚ್ಚಿ ಹೋಗುತ್ತಿದ್ದು ತಾತ್ಕಾಲಿಕವಾಗಿ ಮಾರಾಟಕ್ಕೆಂದು ಹಾಕಲಾಗಿರುವ ಟೆಂಟ್ ಒಳಗೆ ಮಳೆ ನೀರು ನುಗ್ಗಿದ್ದು, ವ್ಯಾಪಾರಕ್ಕೆ ಸಮರ್ಪಕ ವ್ಯವಸ್ಥೆ ಕಲ್ಪಿಸದ ಜಿಲ್ಲಾಡಳಿತದ ವಿರುದ್ದ ವ್ಯಾಪಾರಸ್ಥರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಕೋವಿಡ್ 19 ಸಾಂಕ್ರಾಮಿಕ ಹರಡುತ್ತಿರುವ ಸಂದರ್ಭದಲ್ಲಿ ಕೇಂದ್ರ ಮಾರುಕಟ್ಟೆಯನ್ನು (ಸೆಂಟ್ರಲ್ ಮಾರ್ಕೆಟ್) ಸಂಪೂರ್ಣ ಮುಚ್ಚಲಾಗಿದ್ದು, ಪ್ರಸ್ತುತ ಈಗಿರುವ ಮಾರುಕಟ್ಟೆಯ ವಿನ್ಯಾಸ ಮತ್ತು ರಚನೆ ಸೂಕ್ತವಾಗಿಲ್ಲ. ಅಲ್ಲದೆ ಅದು ದುರಸ್ತಿಗೊಳಿಸಲಾಗದಷ್ಟು ಜೀರ್ಣಾವಸ್ಥೆಗೆ ತಲುಪಿದ್ದು, ಮಂಗಳೂರು ಮಹಾನಗರ ಪಾಲಿಕೆಯೂ ಶೀಘ್ರವೇ ಅದನ್ನು ಕೆಡವಿ ಹಾಕಿ ಹೊಸದಾಗಿ ಅತ್ಯಾಧುನಿಕ ಮಾರುಕಟ್ಟೆ ನಿರ್ಮಿಸುವ ಭರವಸೆ ನೀಡಿ, ಸೆಂಟ್ರಲ್ ಮಾರ್ಕೆಟ್ನಲ್ಲಿ ವ್ಯಾಪಾರ ಮಾಡುತ್ತಿದ್ದ ವ್ಯಾಪಾರಿಗಳು ಬೈಕಂಪಾಡಿ ಎಪಿಎಂಸಿ ಮಾರುಕಟ್ಟೆ ಪ್ರಾಂಗಣಕ್ಕೆ ಸ್ಥಳಾಂತರಗೊಳಿಸಿತ್ತು.