ಮಂಗಳೂರು, ಮೇ 18 (Daijiworld News/MB) : ಭಾನುವಾರ ಕೊರೊನಾ ಪಾಸಿಟಿವ್ ವರದಿ ಬಂದ P-1094 ರೋಗಿಯು ಎಲ್ಲಾ ಚೆಕ್ಪೋಸ್ಟ್ಗಳಲ್ಲಿ ಕಣ್ಣು ತಪ್ಪಿಸಿ ನವದೆಹಲಿಯಿಂದ ಬಂದಿದ್ದು ಫೋಷಕರ ಒತ್ತಾಯದ ಮೇರೆಗೆ ಕೊರೊನಾ ತಪಾಸಣೆ ಮಾಡಿದಾಗ ಸೋಂಕು ಇರುವುದು ದೃಢಪಟ್ಟಿದ್ದು ಈತನ ಟ್ರಾವೆಲ್ ಹಿಸ್ಟರಿಯೇ ಆತಂಕಕಾರಿಯಾಗಿದೆ.
P-1094 ರೋಗಿ ನಗರದ ಜೆಪ್ಪಿನಮೊಗರು ಗ್ರಾಮದ ಜೆಪ್ಪು ಪಟ್ನದ ನಿವಾಸಿಯಾಗಿದ್ದು ದೆಹಲಿಯಲ್ಲಿದ್ದ ಈತ 10 ದಿನಗಳ ಹಿಂದೆ ದೆಹಲಿಯಿಂದ ಕಾಲ್ನಡಿಗೆ ಮೂಲಕ ಹೊರಟಿದ್ದು ಬಳಿಕ ಅಲ್ಲಲ್ಲಿ ಸಿಕ್ಕ ವಾಹನಗಳಿಂದ ಡ್ರಾಪ್ ಪಡೆದು ಚೆಕ್ಪೋಸ್ಟ್ಗಳನ್ನೂ ತಪ್ಪಿಸಿ ಮನೆ ಸೇರಿದ್ದ.
ಯುವಕ ಮನೆಗೆ ಬಂದಾಗ ಆಶ್ಚರ್ಯಗೊಂಡ ಪೋಷಕರು "ಮೊದಲು ನೀನು ಕೊರೊನಾ ಪರೀಕ್ಷೆ ಮಾಡು ಆ ಬಳಿಕ ಮನೆಗೆ ಬಾ" ಎಂದು ಮನೆಯಿಂದ ಹೊರಗಿಟ್ಟಿದ್ದರು. ಆದರೆ ಈತ ಕೊರೊನಾ ತಪಾಸಣೆಗೆ ಒಳಗಾಗದೇ ಪಕ್ಕದಲ್ಲೇ ಇದ್ದ ಅಜ್ಜಿಯ ಮನೆಯಲ್ಲಿ ಉಳಿದುಕೊಂಡಿದ್ದ. ತಂದೆ ತಾಯಿ ಕೊರೊನಾ ತಪಾಸಣೆ ಮಾಡಿಸುವಂತೆ ಒತ್ತಡ ಹೇರಿದ ಕಾರಣಕ್ಕೆ ದೇರಳಕಟ್ಟೆಯ ಖಾಸಗಿ ಆಸ್ಪತ್ರೆಯ ಕೊರೊನಾ ತಪಸಣಾ ಕೇಂದ್ರಕ್ಕೆ ತೆರಳಿ ಪರೀಕ್ಷೆ ಮಾಡಿಸಿಕೊಂಡಿದ್ದು ವರದಿ ಪಾಸಿಟಿವ್ ಆಗಿದೆ.
ಈತ ಲಾಕ್ಡೌನ್ ಮುನ್ನವೇ ದುಬೈನಿಂದ ಬಂದಿದ್ದು ದೆಹಲಿಯ ತನ್ನ ಸ್ವಂತ ಫ್ಲ್ಯಾಟ್ನಲ್ಲಿ ಉಳಿದು ಕೊಂಡಿದ್ದ. ಏತನ್ಮಧ್ಯೆ ಊರಿಗೆ ಹೋಗಬೇಕೆಂದು ತೀರ್ಮಾನ ಮಾಡಿದ ಆತ ದೆಹಲಿಯಿಂದ ಕಾಲ್ನಡಿಗೆಯಲ್ಲೇ ಹೊರಟಿದ್ದು ಸಿಕ್ಕ ಸಿಕ್ಕ ಕಾರು, ವ್ಯಾನ್, ಲಾರಿ ಮೂಲಕ ಗಡಿ ತಪಾಸಣಾ ಅಧಿಕಾರಿಗಳಿಂದಲ್ಲೂ ತಪ್ಪಿಸಿ 10 ದಿನಗಳ ಹಿಂದೆ ಮಂಗಳೂರಿಗೆ ಬಂದಿದ್ದಾನೆ. ಮನೆಯಲ್ಲಿ ಕೊರೊನಾ ತಪಾಸಣೆ ಮಾಡಿಸುವಂತೆ ಹೇಳಿದಾಗ ಅದಕ್ಕೂ ಕಿವಿಗೊಡದ ಆತ ದೆಹಲಿಯಿಂದ ಬಂದ ಬಳಿಕ ಸಂಬಂಧಿಕರನ್ನು ಭೇಟಿಯಾಗಿದ್ದು ಮಾತ್ರವಲ್ಲದೇ, ಊರಿನಲ್ಲೆಲ್ಲಾ ಸುತ್ತಾಡಿದ್ದಾನೆ. ಹಾಗೆಯೇ ಬಂಟ್ವಾಳದಿಂದ ಆಟೋ ಮೂಲಕ ಬಂದಿದ್ದಾನೆ.
ಈತನಿಗೆ ವಿವಾಹ ನಿಶ್ಚಯವಾಗಿರುವ ಕಾರಣದಿಂದಾಗಿ ದೆಹಲಿಯಿಂದ ಮಂಗಳೂರಿಗೆ ಬಂದಿದ್ದಾನೆ ಎಂದು ಹೇಳಲಾಗಿದ್ದು ಈತನ ಟ್ರಾವೆಲ್ ಹಿಸ್ಟರಿಯನ್ನು ಸಂಪೂರ್ಣವಾಗಿ ಪತ್ತೆ ಹಚ್ಚುವುದು ಅಧಿಕಾರಿಗಳಿಗೆ ತಲೆನೋವಾಗಿ ಪರಿಣಮಿಸಿರುವುದು ಮಾತ್ರವಲ್ಲದೇ ಸೋಂಕಿತನ ಈ ಕೃತ್ಯದಿಂದ ಜಿಲ್ಲೆಯ ವಿವಿಧ ಕಡೆ ಆತಂಕದ ವಾತಾವರಣ ಮನೆ ಮಾಡಿದೆ.