ಉಡುಪಿ, ಮೇ 18 (Daijiworld News/MSP): ಕ್ವಾರಂಟೈನ್ ನಿಯಮ ಪಾಲಿಸದಿದ್ರೆ ಅಂಥವರ ವಿರುದ್ದ ಸಾಂಕ್ರಾಮಿಕ ರೋಗ ನಿಯಂತ್ರಣಾ ಕಾಯ್ದೆ ಅಡಿ ಯಾವುದೇ ಮುಲಾಜಿಲ್ಲದೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗುವುದು ಎಂದು ಉಡುಪಿ ಜಿಲ್ಲಾಧಿಕಾರಿ ಜಿ.ಜಗದೀಶ್ ಮತ್ತೊಮ್ಮೆ ಎಚ್ಚರಿಕೆ ನೀಡಿದ್ದಾರೆ.
ಈಗಾಗಲೇ ಅಂತರ್ ರಾಷ್ಟ್ರೀಯ ಹಾಗೂ ಅಂತರ್ ರಾಜ್ಯಗಳಿಂದ ಸುಮಾರು 6000ಕ್ಕೂ ಹೆಚ್ಚು ಮಂದಿ ಉಡುಪಿ ಜಿಲ್ಲೆಯ ಬಂಧುಗಳು ತವರೂರಿಗೆ ಆಗಮಿಸಿದ್ದಾರೆ. ಹೊರ ಊರುಗಳಿಂದ ಆಗಮಿಸಿದ ಜನರನ್ನು ಜಿಲ್ಲಾಡಳಿತ ಸ್ವಾಗತಿಸಿ. ಹೊಟೇಲ್ , ಹಾಸ್ಟೆಲ್ , ಶಾಲೆ ಮುಂತಾದ ಕಡೆ ಕ್ವಾರಂಟೈನ್ ನಲ್ಲಿ ಇರಿಸಲಾಗಿದೆ. ಆದರೆ ಕ್ವಾರಂಟೈನ್ ಗೆ ಒಳಪಡಿಸಲಾಗಿರುವ ಜನರು ಹೊರಗೆ ಬಂದು ಓಡಾಡುವುದು ಹಾಗೂ ಜನರ ಸಂಪರ್ಕ ಬೆಳೆಸುತ್ತಿರುವ ಬಗ್ಗೆ ಜಿಲ್ಲೆಯ ಹಲವೆಡೆಗಳಿಂದ ದೂರುಗಳು ಬರುತ್ತಿದೆ. ಇಂತವರ ವಿರುದ್ದ ಸಾಂಕ್ರಾಮಿಕ ರೋಗ ನಿಯಂತ್ರಣಾ ಕಾಯ್ದೆ ಅಡಿ ಸೆಕ್ಷನ್ 188 ಪ್ರಕಾರ ಮುಲಾಜಿಲ್ಲದೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.
ಹೊರದೇಶ ಹಾಗೂ ಹೊರರಾಜ್ಯಗಳಿಂದ ಉಡುಪಿ ಜಿಲ್ಲೆಗೆ ಆಗಮಿಸಿದವರಿಗಾಗಿ ಜಿಲ್ಲಾಡಳಿತ ಕ್ವಾರಂಟೈನ್ ವ್ಯವಸ್ಥೆ ಮಾಡಿದೆ ಇದರ ಸದುಪಯೋಗಪಡಿಸಿಕೊಳ್ಳಬೇಕು. ಕ್ವಾರಂಟೈನ್ ನಲ್ಲಿರುವವರಿಂದ ಇತರರಿಗೆ ಸೋಂಕು ಹರಡಬಾರದು ಎಂಬವುದಷ್ಟೇ ಇದರ ಉದ್ದೇಶವಾಗಿದೆ. ಇದನ್ನು ತಪ್ಪದೆ ಪಾಲನೆ ಮಾಡಬೇಕು. ಹೀಗಾಗಿ ಎಲ್ಲರೂ ಎಚ್ಚರಿಕೆ ವಹಿಸಿಬೇಕು ಎಂದು ಹೇಳಿದ್ದಾರೆ.