ಮಂಗಳೂರು, ಮಾ 19: ಮೂಲ್ಕಿ-ಮೂಡುಬಿದಿರೆ ಕ್ಷೇತ್ರದಿಂದ ಕಾಂಗ್ರೆಸ್ ಪಕ್ಷದ ಟಿಕೆಟ್ಗಾಗಿ ಆಕಾಂಕ್ಷಿಗಳಿಂದ ತೆರೆಮರೆಯ ಪ್ರಯತ್ನಗಳು ಮುಂದುವರಿದಿದೆ. ಮೂಡುಬಿದಿರೆ ಕ್ಷೇತ್ರದ ಹಾಲಿ ಶಾಸಕ ಅಭಯಚಂದ್ರ ಜೈನ್ ‘ತಾನು ಮತ್ತೆ ಸ್ಪರ್ಧಿಸಲ್ಲ’ ಎಂದು ಹೇಳಿದ್ದರಿಂದ ಪಕ್ಷದ ಟಿಕೆಟ್ ಆಕಾಂಕ್ಷಿ ಚಿತ್ತ ಇತ್ತ ಸರಿದಿತ್ತು. ಇವರಲ್ಲಿ ವಿಧಾನ ಪರಿಷತ್ ಮುಖ್ಯ ಸಚೇತಕ ಐವನ್ ಡಿ ಸೋಜ ಹಾಗೂ ಯೂತ್ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ ಈಗಾಗಲೇ ಟಿಕೆಟ್ ಸಿಗುವ ಅಭಿಲಾಷೆಯಲ್ಲಿ ಯತ್ನ ಮುಂದುವರಿಸಿದ್ದಾರೆ.
ಈ ನಡುವೆ ಇದೀಗ ಮಾಜಿ ಮೇಯರ್ ಕವಿತಾ ಸನಿಲ್ ಈ ಕ್ಷೇತ್ರದಲ್ಲಿ ಟಿಕೆಟ್ ಪಡೆಯಲು ಯತ್ನಿಸುತ್ತಿದ್ದಾರೆ. ಕೆಲವು ದಿನಗಳ ಹಿಂದೆಯಷ್ಟೇ ಕವಿತಾ ಸನಿಲ್ ಅವರನ್ನು ಅಖಿಲಭಾರತ ಕಾಂಗ್ರೆಸ್ ಸಮಿತಿ ಸದಸ್ಯೆಯನ್ನಾಗಿ ನೇಮಕ ಮಾಡಲಾಗಿದ್ದು ದೆಹಲಿಯಲ್ಲಿ ಮೊಕ್ಕಾಂ ಹೂಡಿರುವ ಕವಿತಾ ಸನಿಲ್ ಪಕ್ಷದ ಹಿರಿಯ ನಾಯಕರ ಜೊತೆಯಲ್ಲಿ ಪಕ್ಷದ ಸಭೆಯಲ್ಲಿ ಪಾಲ್ಗೊಂಡಿದ್ದಾರೆ. ಅಲ್ಲದೆ ಟಿಕೆಟ್ ಖಚಿತಪಡಿಸಿಕೊಂಡೇ ವಾಪಾಸ್ಸಾಗಲಿದ್ದಾರೆ ಎಂದು ಹೇಳಲಾಗುತ್ತಿದೆ. ಶಾಸಕ ಅಭಯಚಂದ್ರ ಜೈನ್ ಈ ಬಾರಿಯ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸುವುದಿಲ್ಲವಾದ್ದರಿಂದ ತನಗೆ ಟಿಕೆಟ್ ಕೊಡಬೇಕೆಂದು ಕವಿತಾ ಸನಿಲ್ ಒತ್ತಡ ಹಾಕಿದ್ದಾರೆ. ಪಕ್ಷವು ಕರಾವಳಿಯಲ್ಲಿ ಮಹಿಳಾ ಅಭ್ಯರ್ಥಿಗಳನ್ನು ಕಡೆಗಣಿಸುತ್ತಿದ್ದು ಈ ನೆಲೆಯಲ್ಲಿ ತನ್ನ ಆಯ್ಕೆ ಸಾಧ್ಯತೆ ಇದೆ. ಅಲ್ಲದೆ ಬಿಲ್ಲವ ಪ್ರತಿನಿಧಿಯಾಗಿ ಕೂಡಾ ಸ್ಪರ್ಧಿಸಲು ತಾನು ಸೂಕ್ತ ಅಭ್ಯರ್ಥಿ ಎಂದವರು ಹೇಳಿದ್ದಾರೆ. ಆದರೆ ಪಕ್ಷ ಯಾವ ನಿರ್ಧಾರ ತೆಗೆದುಕೊಳ್ಳಲಿದೆ ಎನ್ನುವ ಕುತೂಹಲವೂ ತೀವ್ರಗೊಂಡಿದೆ.