ಉಡುಪಿ, ಮೇ 18 (DaijiworldNews/PY) : ಉಡುಪಿಯಲ್ಲಿ ಕ್ವಾರಂಟೈನ್ ಕೇಂದ್ರದಲ್ಲಿದ್ದ ಒಂದು ವರ್ಷದ ಮಗುವಿನ ಹುಟ್ಟುಹಬ್ಬವನ್ನು ಉಡುಪಿ ಶಾಸಕ ಕೆ.ರಘುಪತಿ ಭಟ್ ಅವರು ವಿಶೇಷವಾಗಿ ಆಚರಿಸಿದ್ದಾರೆ.
ವಿದೇಶಗಳಿಂದ ಹಾಗೂ ಹೊರ ರಾಜ್ಯದಿಂದ ಉಡುಪಿಗೆ ಬಂದು ಸುಮಾರು 6 ಸಾವಿರ ಜನ ಕ್ವಾರಂಟೈನ್ ಆಗಿದ್ದಾರೆ. ಆದರೆ, ಇಲ್ಲಿ ಸಣ್ಣ ಸಣ್ಣ ಖುಷಿಗಳನ್ನು ಆಚರಣೆ ಮಾಡಲು ಉಡುಪಿ ಜಿಲ್ಲಾಡಳಿತ ವಿನಾಯಿತಿ ನೀಡುತ್ತದೆ. ಹಾಗಾಗಿ ಕ್ವಾರಂಟೈನ್ ಕೇಂದ್ರದಲ್ಲಿರುವ ಮಗುವಿನ ಹುಟ್ಟುಹಬ್ಬವನ್ನು ಆಚರಿಸಲಾಗಿದೆ.
ಮಹಾರಾಷ್ಟ್ರದ ಥಾಣೆಯಿಂದ ಉಡುಪಿಗೆ ಬಂದಿರುವ ದಿನೇಶ್ ಹಾಗೂ ಅಮೃತ ದಂಪತಿ ಸಮಾಜ ಕಲ್ಯಾಣ ಇಲಾಖೆ ಹಾಸ್ಟೆಲ್ನಲ್ಲಿ ಕ್ವಾರಂಟೈನ್ನಲ್ಲಿದ್ದಾರೆ. ಈ ವೇಳೆ ತಮ್ಮ ಒಂದು ವರ್ಷದ ಮಗಳು ಆದ್ಯಳ ಹುಟ್ಟುಹಬ್ಬ ಬಂದಿದೆ. ಕ್ವಾರಂಟೈನ್ ಕೇಂದ್ರದಲ್ಲಿ ಹುಟ್ಟುಹಬ್ಬ ಆಚರಣೆ ಅವಕಾಶ ಕಲ್ಪಿಸುವಂತೆ ದಿನೇಶ್ ಕುಟುಂಬ ಉಡುಪಿ ಶಾಸಕ ಕೆ.ರಘುಪತಿ ಭಟ್ ಅವರೊಂದಿಗೆ ಮನವಿ ಮಾಡಿದ್ದರು. ಹಾಗಾಗಿ ಆದ್ಯಳ ಪ್ರಥಮ ವರ್ಷದ ಹುಟ್ಟುಹಬ್ಬವನ್ನು ಕ್ವಾರಂಟೈನ್ ಕೇಂದ್ರದಲ್ಲಿ ಆಚರಿಸಲು ಜಿಲ್ಲಾಡಳಿತ ಅವಕಾಶ ಕಲ್ಪಿಸಿದೆ.
ಕ್ವಾರಂಟೈನ್ ಕೇಂದ್ರದಲ್ಲಿ ಆದ್ಯಳ ಹುಟ್ಟುಹಬ್ಬವನ್ನು ಆಚರಣೆ ಮಾಡಲು ಅಧಿಕಾರಿಗಳ ಮೂಲಕ ಅವಕಾಶ ಸಿಕ್ಕಿದ್ದು, ವಿಶೇಷವೆಂದರೆ ಮಗುವಿನ ಹುಟ್ಟುಹಬ್ಬಕ್ಕೆ ಶಾಸಕರೇ ಕೇಕ್ ವ್ಯವಸ್ಥೆ ಮಾಡಿದ್ದಾರೆ. ಕ್ವಾರಂಟೈನ್ ಕೇಂದ್ರದಲ್ಲಿ ಮಗುವಿನ ಹುಟ್ಟುಹಬ್ಬವನ್ನು ಸರಳವಾಗಿ ಆಚರಿಸಿದ್ದಾರೆ.