ಮಂಗಳೂರು, ಮೇ 18 (Daijiworld News/MSP): ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯಲ್ಲಿ ಕೊರೊನಾ ಮತ್ತಷ್ಟು ಆತಂಕ ಸೃಷ್ಟಿಸಿದ್ದು, ಸೋಮವಾರ ದ.ಕದಲ್ಲಿ ಇಬ್ಬರಿಗೆ ಹಾಗೂ ಉಡುಪಿಯಲ್ಲಿ 7 ತಿಂಗಳ ಗರ್ಭಿಣಿಯಲ್ಲಿ ಕೊರೊನಾ ದೃಢಪಟ್ಟಿದೆ.
ಮಹಾರಾಷ್ಟ್ರದ ರಾಯಗಡದಿಂದ ಆಗಮಿಸಿ ಕ್ವಾರೆಂಟೈನ್ ನಲ್ಲಿದ್ದ 30 ವರ್ಷದ ವ್ಯಕ್ತಿ ಹಾಗೂ ಮಂಗಳೂರಿನ ಯಯ್ಯಾಡಿ ನಿವಾಸಿಯಾಗಿರುವ 55 ವರ್ಷದ ಮಹಿಳೆಯೂ ತೀವ್ರ ಉಸಿರಾಟದ ತೊಂದರೆ (SARI) ಹಾಗೂ ಜ್ವರದಿಂದ ಬಳಲುತ್ತಿದ್ದು, ತಪಾಸಣೆಗೆಂದು ಕೋವಿಡ್ ಆಸ್ಪತ್ರೆಗೆ ಬಂದಾಗ ಕೊರೊನಾ ಪಾಸಿಟಿವ್ ಪತ್ತೆಯಾಗಿದೆ
ಇನ್ನು ಮಹಾರಾಷ್ಟ್ರದ ಮುಂಬೈ ನಿಂದ ಆಗಮಿಸಿ ಕ್ವಾರಂಟೈನ್ ನಲ್ಲಿದ್ದ ಉಡುಪಿಯ ಕೊಲ್ಲೂರಿನ 28 ವರ್ಷದ ಮಹಿಳೆಗೂ ಕೊರೊನಾ ದೃಢವಾಗಿದೆ. ಗರ್ಭಿಣಿ ಮಹಿಳೆಯೊಂದಿಗೆ ಆಕೆಯ ಪತಿಯನ್ನು ಐಷೋಲೇಷನ್ ಗೆ ಒಳಪಡಿಸಲಾಗಿದೆ. ಗರ್ಭಿಣಿ ಮುಂಬೈನಿಂದ ಪ್ರಯಾಣಿಸಿದ್ದ ಬಸ್ಸಿನಲ್ಲಿದ್ದ 28 ಮಂದಿಯನ್ನು ಈಗಾಗಲೇ ಕ್ವಾರಂಟೈನ್ ಗೆ ಒಳಪಡಿಸಲಾಗಿದೆ
ಇನ್ನು ಬಂಟ್ವಾಳದ ಕಸಬಾ ನಿವಾಸಿಯಾಗಿರುವ ರೋಗಿ ಸಂಖ್ಯೆ 578 ಇವರು ಸಂಪೂರ್ಣವಾಗಿ ಗುಣಮುಖರಾಗಿ ವೆನ್ಲಾಕ್ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. ದ.ಕದಲ್ಲಿ ಈವರೆಗೆ 47 ಕೊರೊನಾ ಪ್ರಕರಣ ದೃಢಪಟ್ಟಿದ್ದು, ಈ ಪೈಕಿ 10 ಮಂದಿ ಗುಣಮುಖರಾಗಿದ್ದಾರೆ. 32 ಸಕ್ರಿಯ ಪ್ರಕರಣಗಳಿದ್ದು, ಐವರು ಮೃತಪಟ್ಟಿದ್ದಾರೆ. ಉಡುಪಿಯಲ್ಲಿ 11 ಕೊರೊನಾ ಪ್ರಕರಣ ದೃಢಪಟ್ಟಿದ್ದು ಈ ಪೈಕಿ 3 ಮಂದಿ ಗುಣಮುಖರಾಗಿದ್ದಾರೆ. 7 ಸಕ್ರಿಯ ಪ್ರಕರಣಗಳಿದ್ದು ಓರ್ವ ಮೃತಪಟ್ಟಿದ್ದಾನೆ.