ಉಡುಪಿ, ಮೇ 18 (DaijiworldNews/SM): ಕೊರೊನಾ ಸಂಕಷ್ಟದಿಂದಾಗಿ ಮುಂಬೈನಿಂದ ಬಂದು ಉಡುಪಿಯಲ್ಲಿ ಕ್ವಾರಂಟೈನ್ ನಲ್ಲಿದ ಮಹಿಳೆ ಹಾಗೂ ಮಗನ ನೋವಿಗೆ ಶಾಸಕ ರಘುಪತಿ ಭಟ್ ಸ್ಪಂದಿಸಿದ್ದಾರೆ.
ಕೊರೊನ ಮಾಹಾಮಾರಿಯ ಈ ಸಂದಿಗ್ಧ ಪರಿಸ್ಥಿತಿಯಲ್ಲಿ ಊರಿನಲ್ಲಿ ಅನಾರೋಗ್ಯಕ್ಕೆ ತುತ್ತಾಗಿ ಗಂಭೀರ ಸ್ಥಿತಿಯಲ್ಲಿ ಇರುವ ತನ್ನ ಗಂಡನನ್ನು ನೋಡಲು ಮುಂಬೈನಿಂದ ದಕ್ಷಿಣ ಕನ್ನಡ ಜಿಲ್ಲೆಯ ಸುರತ್ಕಲ್ ಗೆ ಬರಬೇಕಾದ ಮಹಿಳೆ ಹಾಗೂ ಅವರ ಮಗ ಉಡುಪಿ ಜಿಲ್ಲೆಯ ಬ್ರಹ್ಮಾವರ ಎಸ್.ಎಂ.ಎಸ್. ಕಾಲೇಜಿನಲ್ಲಿ ಸರ್ಕಾರಿ ಕ್ವಾರಂಟೈನ್ ಗೆ ಒಳಗಾಗಿದ್ದರು. ಇಂದು ಶಾಸಕ ಕೆ. ರಘುಪತಿ ಭಟ್ ಇಲ್ಲಿಗೆ ಭೇಟಿ ನೀಡಿ ಯೋಗ ಕ್ಷೇಮ ವಿಚಾರಿಸಿದಾಗ ಮುಂಬೈನಿಂದ ಉಡುಪಿಯ ಪಾಸ್ ಪಡೆದು ಆಗಮಿಸಿ ಇಲ್ಲಿ ಕ್ವಾರಂಟೈನ್ ಆಗಿದ್ದು, ಅನಾರೋಗ್ಯದಿಂದ ಗಂಭೀರ ಸ್ಥಿತಿಯಲ್ಲಿ ತೀವ್ರ ನಿಗಾ ಘಟಕದಲ್ಲಿ ಇರುವ ನನ್ನ ಗಂಡನನ್ನು ನೋಡಲು ಅವಕಾಶ ಮಾಡಿಕೊಡಿ ಎಂದು ಕಣ್ಣೀರಿಟ್ಟು ನನ್ನನ್ನು ಸುರತ್ಕಲ್ ಗೆ ಕಳುಹಿಸಿ ಕೊಡಿ ಅಲ್ಲಿ ಕ್ವಾರಂಟೈನ್ ಆಗುತ್ತೇನೆ ಎಂದು ಅಳಲು ತೋಡಿಕೊಂಡಿದ್ದಾರೆ.
ತಕ್ಷಣ ಸ್ಪಂದಿಸಿದ ಶಾಸಕರು ಅವರನ್ನು ಕಳುಹಿಸಿ ಕೊಡಲು ಸರ್ಕಾರದ ನಿಯಮಾವಳಿಯ ಬಗ್ಗೆ ಜಿಲ್ಲಾಧಿಕಾರಿಯವರಲ್ಲಿ ಚರ್ಚಿಸಿದರು. ಇವರ ಮನೆ ಮೂಡುಬಿದಿರೆ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಬರುವುದರಿಂದ ಅಲ್ಲಿನ ಶಾಸಕರಾದ ಉಮಾನಾಥ್ ಕೋಟ್ಯಾನ್ ಅವರಲ್ಲಿ ಚರ್ಚಿಸಿ ತಹಶೀಲ್ದಾರ್ ಹಾಗೂ ಪೊಲೀಸ್ ಅಧಿಕಾರಿ ಯವರಿಗೆ ಅವರನ್ನು ಸರ್ಕಾರಿ ನಿಯಮಾವಳಿಯಂತೆ ಕಳುಹಿಸಲು ಸೂಚಿದರು. ಕ್ವಾರಂಟೈನ್ ನಲ್ಲಿ ಇದ್ದ ಮಹಿಳೆ ಅವರದೇ ಖರ್ಚಿನಲ್ಲಿ ಹೊರಡಬೇಕಾಗಿದ್ದು, ಈ ಸಂದರ್ಭ ತನ್ನ ಪರಿಸ್ಥಿತಿಯನ್ನು ಶಾಸಕರಲ್ಲಿ ತಿಳಿಸಿ ಕಣ್ಣೀರಿಟ್ಟಾಗ ಅವರನ್ನು ಉಡುಪಿಯಿಂದ ಸುರತ್ಕಲ್ ವರೆಗೆ ಬಿಟ್ಟು ಬರಲು ತನ್ನ ಸ್ವಂತ ಖರ್ಚಿನಿಂದ ವಾಹನದ ವ್ಯವಸ್ಥೆ ಮಾಡಿದ್ದಾರೆ. ಕ್ವಾರಂಟೈನ್ ಗೆ ಒಳಗಾದ ಇತರರನ್ನು ಇಲ್ಲಿನ ವ್ಯವಸ್ಥೆ ಗಳ ಬಗ್ಗೆ ವಿಚಾರಿಸಿದಾಗ ಎಲ್ಲರೂ ತಮಗೆ ನೀಡಿದ ಸೂಕ್ತ ವ್ಯವಸ್ಥೆ, ಉಪಹಾರ ಊಟದ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸಿದರು.