ಮಂಗಳೂರು, ಮೇ 18 (DaijiworldNews/SM): ದುಬೈನಿಂದ ಮಂಗಳೂರಿಗೆ ಆಗಮಿಸಿದ ಎರಡನೇ ವಿಶೇಷ ವಿಮಾನ ಮೇ 18ರ ಸೋಮವಾರ ಸಂಜೆ 7 ಗಂಟೆ 45 ನಿಮಿಷಕ್ಕೆ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಆಗಿದೆ.
ದುಬೈನಿಂದ ಬಂದ ವಿಶೇಷ ವಿಮಾನದಲ್ಲಿ ಶಿಶು ಸೇರಿ 177 ಮಂದಿ ಪ್ರಯಾಣಿಕರು ಆಗಮಿಸಿದ್ದು, ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಂದಿಳಿದಿದ್ದಾರೆ. ಆಗಮಿಸಿದ ಪ್ರಯಾಣಿಕರ ಸ್ಕ್ರೀನಿಂಗ್ ಕಾರ್ಯ ಪ್ರಗತಿಯಲ್ಲಿದೆ.
ಇದೀಗ ಲ್ಯಾಂಡ್ ಆಗಿರುವ ವಿಮಾನದಲ್ಲಿ ಒಂದು ಶಿಶು ಸೇರಿದಂತೆ 177 ಮಂದಿ ಪ್ರಯಾಣಿಕರು ಆಗಮಿಸಿದ್ದಾರೆ. ಇನ್ನು ಇವರ ಪೈಕಿ 99 ಪುರುಷ ಪ್ರಯಾಣಿಕರಾಗಿದ್ದು, 67 ಮಂದಿ ಮಹಿಳಾ ಪ್ರಯಾಣಿಕರಾಗಿದ್ದಾರೆ. 11 ಮಂದಿ ಮಕ್ಕಳು ಮಂಗಳೂರಿಗೆ ತಲುಪಿದ್ದಾರೆ.
ಇನ್ನು ಈ ಹಿಂದಿನಂತೆ ಇಂದಿನ ವಿಮಾನದಲ್ಲೂ ಕೂಡ ಗರ್ಭಿಣಿಯರು, ತುರ್ತು ಆರೋಗ್ಯ ಸೇವೆ ಬೇಕಾದವರು, ಮಕ್ಕಳು, ಹಿರಿಯ ನಾಗರಿಕರು ಸೇರಿದಂತೆ ಸಂಕಷ್ಟಕ್ಕೀಡಾದವರಿಗೆ ಮೊದಲ ಆದ್ಯತೆ ನೀಡಲಾಗಿದೆ. ಇನ್ನು ಸ್ಕ್ರೀನಿಂಗ್ ನಡೆಸಿದ ಬಳಿಕ ಪ್ರಯಾಣಿಕರನ್ನು ನಿಗದಿತ ಕ್ವಾರಂಟೈನ್ ಗಳಿಗೆ ಒಳಪಡಿಸಲಿದ್ದಾರೆ.
ಪ್ರಯಾಣಿಕರು ವಿಮಾನದಿಂದ ಇಳಿದ ನಂತರ ವಿಮಾನ ನಿಲ್ದಾಣದಲ್ಲಿ ಹಣ ವರ್ಗಾವಣೆ, ಸಿಮ್ ವಿತರಣೆ, ಆರೋಗ್ಯ ಕಿಟ್ ವಿತರಣೆ, ಉಪಹಾರ ವ್ಯವಸ್ಥೆ ಮಾಡಲಾಯಿತು. ನಂತರ ಆರೋಗ್ಯ ಇಲಾಖೆಯ ತಪಾಸಣಾ ತಂಡದಿಂದ ಪ್ರತೀ ಪ್ರಯಾಣಿಕರ ಆರೋಗ್ಯ ತಪಾಸಣೆ ಮಾಡಲಾಯಿತು. ಪ್ರಯಾಣಿಕರಿಗೆ ಸ್ಟಾಂಪಿಂಗ್ ಮಾಡಿ, ಇಮಿಗ್ರೇಷನ್ ಪ್ರಕ್ರಿಯೆ ನಡೆಸಲಾಯಿತು. ಅಲ್ಲದೆ ಆಗಮಿಸಿದ ಪ್ರಯಾಣಿಕರಿಗೆ ಊಟದ ವ್ಯವಸ್ಥೆಯನ್ನೂ ಏರ್ಪಡಿಸಲಾಗಿದೆ.
ವಿಮಾನ ಆಗಮನ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್, ಅಪರ ಜಿಲ್ಲಾಧಿಕಾರಿ ರೂಪಾ, ಪ್ರೊಬೇಷನರಿ ಐಎಎಸ್ ಅಧಿಕಾರಿ ರಾಹುಲ್ ಶಿಂಧೆ,ಜಿಲ್ಲಾ ಆರೋಗ್ಯಾಧಿಕಾರಿ ಡಾ.ರಾಮಚಂದ್ರ ಬಾಯರಿ, ವಿಮಾನ ನಿಲ್ದಾಣ ನಿರ್ದೇಶಕ ವಿ.ವಿ. ರಾವ್, ಆರೋಗ್ಯ ಇಲಾಖೆಯ ಹಿರಿಯ ಅಧಿಕಾರಿಗಳು ಹಾಜರಿದ್ದರು.
ಇನ್ನು ಮೇ 12ರಂದು ದುಬೈನಲ್ಲಿ ಸಂಕಷ್ಟಕ್ಕೀಡಾದವರನ್ನು ಕರೆದುಕೊಂಡು ಮೊದಲ ವಿಮಾನ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂದಿಳಿದಿತ್ತು. ಈ ಸಂದರ್ಭದಲ್ಲಿ ಒಂದಿಷ್ಟು ತೊಂದರೆಗಳು ಎದುರಾಗಿದ್ದವು. ಆದರೆ, ತಪ್ಪುಗಳನ್ನು ವಿಮಾನ ನಿಲ್ದಾಣ ಪ್ರಾಧಿಕಾರ ಹಾಗೂ ದ.ಕ. ಜಿಲ್ಲಾಡಳಿತ ಸರಿಪಡಿಸಿಕೊಂಡಿದೆ.