ಮಾ, 19: ಹಾಡಹಗಲೇ ಪೊಲೀಸರ ಮೇಲೆಯೇ ದಾಳಿ ಮಾಡಿದ ಘಟನೆ ಬೆಂಗಳೂರಿನ ವರ್ತೂರು ಪೊಲೀಸ್ ಠಾಣೆ ವ್ಯಾಪ್ತಿಯ ಸಿದ್ದಾಪುರ ಬಳಿ ಭಾನುವಾರ ಮಧ್ಯಾಹ್ನ ನಡೆದಿದೆ. ಘಟನೆಗೆ ಸಂಬಂಧಿಸಿದಂತೆ ಕುಮಾರ್, ಸುದೀಪ್, ಮೂರ್ತಿ, ಮುರಳಿ ಮೋಹನ್ ಎಂಬ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ.ಇಸ್ಪೀಟ್ ಆಟ ಆಡುತ್ತಿದ್ದ ಅಡ್ಡೆಗಳ ಮೇಲೆ ಪೋಲೀಸ್ ಪೇದೆಗಳು ದಾಳಿ ನಡೆಸಿದ್ದು ಈ ವೇಳೆ ದುಷ್ಕರ್ಮಿಗಳು ಪೇದೆಗಳ ಮೇಲೆ ಕೈ ಮಾಡಿದ್ದಾರೆ. ಸಾರ್ವಜನಿಕರ ಮುಂದೆಯೇ ಅವರನ್ನು ಅಟ್ಟಾಡಿಸಿಕೊಂಡು ಹೊಡೆದಿದ್ದಾರೆ. ತಮ್ಮ ಮೇಲೆ ಹಲ್ಲೆ ನಡೆಯುತ್ತಿದ್ದಂತೆಯೇ ಪೊಲೀಸರು ಸ್ಥಳದಿಂದ ಕಾಲ್ಕಿತ್ತು ದುಷ್ಕರ್ಮಿಗಳ ಕೈಯಿಂದ ತಪ್ಪಿಸಿಕೊಂಡಿದ್ದಾರೆ.
ಪೊಲೀಸರ ಮೇಲೆ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾತನಾಡಿದ ವೈಟ್ ಫೀಲ್ಡ್ ಡಿಸಿಪಿ ಅಬ್ದುಲ್ ಅಹದ್, ವೈಟ್ ಫೀಲ್ಡ್ ಪೊಲೀಸ್ ಸಿಬ್ಬಂದಿಗಳಾದ ಬಸಪ್ಪ ಗಾಣಿಗೇರ ಮತ್ತು ಶರಣಬಸಪ್ಪ ಬೀಟ್ ನಲ್ಲಿದ್ದರು. ಈ ವೇಳೆ ಅವರು ಜೂಜಾಟದ ಮಾಹಿತಿ ಮೇರೆಗೆ ಸ್ಥಳಕ್ಕೆ ತೆರಳಿದ್ದಾರೆ. ಇಸ್ಪಿಟ್ ಅಡ್ಡೆಯಲ್ಲಿ ಎಷ್ಟು ಜನ ಇದ್ದಾರೆಂಬ ಮಾಹಿತಿ ಪೇದೆಗಳಿಗೆ ಇರಲಿಲ್ಲ. ಹೀಗಾಗಿ ಪೊಲೀಸರು ಸ್ಥಳಕ್ಕೆ ದೌಡಾಯಿಸಿದ ತಕ್ಷಣವೇ ಕುಡಿದ ಮತ್ತಿನಲ್ಲಿದ್ದ ಆರೋಪಿಗಳು ಪೊಲೀಸರನ್ನು ತಳ್ಳಾಡಿ, ಹಲ್ಲೆ ಮಾಡಿದ್ದಾರೆ. ಈ ಸುದ್ದಿ ತಿಳಿದ ತಕ್ಷಣ ಮತ್ತೆ ಕೆಲ ಪೊಲೀಸರು ತೆರಳಿದ್ರು. ಆದ್ರೆ ಅರೋಪಿಗಳು ಅದಾಗಲೇ ಅಲ್ಲಿಂದ ಓಡಿ ಹೋಗಿದ್ರು. ಈ ಸಂಬಂಧ ನಾಲ್ವರನ್ನು ಈಗಾಗಲೇ ಅರೆಸ್ಟ್ ಮಾಡಲಾಗಿದೆ. ಉಳಿದ ಎಂಟು ಮುಂದಿಗಾಗಿ ಹುಡುಕಾಟ ನಡೆಯುತ್ತಿದೆ. ಹಲ್ಲೆಗೊಳಗಾದವರು ವೈಟ್ ಫೀಲ್ಡ್ ಪೊಲೀಸ್ ಠಾಣೆ ಪೇದೆಗಳಾಗಿದ್ದು, ವರ್ತೂರು ವ್ಯಾಪ್ತಿಗೆ ಏಕೆ ಹೋದರು ಅನ್ನೋದು ತಿಳಿಯಬೇಕಿದೆ ಎಂದು ಅವರು ಹೇಳಿದ್ದಾರೆ.
ಪೋಲೀಸರ ಮೇಲೆ ಹಲ್ಲೆ ಖಂಡನೀಯ. ಕಾನೂನು ಸುವ್ಯವಸ್ಥೆ ಪಾಲನೆ ಮಾಡಲು ತೆರಳಿದ ಪೋಲೀಸರ ಮೇಲೆ ಆರೋಪಿಗಳು ಹಲ್ಲೆ ನಡೆಸಿದ್ದಾರೆ. ಈ ಪ್ರಕರಣದಲ್ಲಿ ಭಾಗಿಯಾದವರು ಯಾರೇ ಆಗಿರಲಿ ಕಾನೂನು ಕ್ರಮ ಕೈಗೊಳ್ಳುತ್ತೇವೆ. ಎಂದು ಗೃಹ ಸಚಿವ ರಾಮಲಿಂಗಾರೆಡ್ಡಿ ಹೇಳಿದ್ದಾರೆ.