ಉಳ್ಳಾಲ, ಮೇ 18 (DaijiworldNews/SM): ಸೋಮೇಶ್ವರದ ಉಚ್ಚಿಲ ಕೋಟೆಪುರ ನಿವಾಸಿ ಕೆಸಿಎಫ್ ಅಬುದಾಬಿ ಘಟಕದ ಕಾರ್ಯಕರ್ತರೊಬ್ಬರು ಅಬುದಾಬಿಯ ಮಫ್ರಖ್ ಆಸ್ಪತ್ರೆಯಲ್ಲಿ ಭಾನುವಾರ ಕೊರೊನಾದಿಂದ ಮೃತಪಟ್ಟಿದ್ದಾರೆ.
ಕಳೆದ 25 ವರ್ಷಗಳಿಂದ ಅಬುದಾಬಿಯಲ್ಲಿ ಟ್ರಾನ್ಸ್ ಪೋರ್ಟ್ ವಿಭಾಗದಲ್ಲಿ ಚಾಲಕರಿಗೆ ಮುಖ್ಯಸ್ಥರಾಗಿ ಉದ್ಯೋಗದಲ್ಲಿದ್ದ ಅವರು ಕಳೆದ ನವೆಂಬರ್ ತಿಂಗಳಲ್ಲಿ ಊರಿಗೆ ಬಂದಿದ್ದರು. ಜನವರಿ 10ರಂದು ವಾಪಸ್ ಅಬುದಾಬಿಗೆ ಮರಳಿದ್ದರು. ಕೊರೊನಾ ಹಿನ್ನೆಲೆಯಲ್ಲಿ ಲಾಕ್ ಡೌನ್ ಪ್ರಯುಕ್ತ ಕೋಣೆಯಲ್ಲೇ ಇದ್ದ ಅವರಿಗೆ ಏಪ್ರಿಲ್ 28ರಂದು ಜ್ವರ ಬಂದಿದ್ದು ಔಷಧಿಯಲ್ಲಿ ಗುಣವಾಗದ ಕಾರಣ ಮೇ 6ರಂದು ಮಫ್ರಖ್ ಆಸ್ಪತ್ರೆಗೆ ವೈದ್ಯಕೀಯ ಪರೀಕ್ಷೆ ಮಾಡಿಸಲು ಹೋಗಿದ್ದರು.
ಅಂದು ಅವರ ಗಂಟಲಿನ ದ್ರವ ಪರೀಕ್ಷೆ ಮಾಡಿಸಲಾಗಿತ್ತು. ಈ ನಡುವೆ ಅವರಿಗೆ ನ್ಯುಮೋನಿಯಾ ಜ್ವರ ಬಾಧಿಸಿದ್ದು, ಕಿಡ್ನಿ ಸಮಸ್ಯೆಯೂ ಕಾಣಿಸತೊಡಗಿದೆ. ಹತ್ತು ದಿನ ಆಸ್ಪತ್ರೆಯಲ್ಲಿದ್ದ ಅವರಿಗೆ ಎರಡು ದಿನದ ಬಳಿಕ ಕೊರೊನಾ ಇರುವುದು ದೃಢಪಟ್ಟಿತ್ತು. ಇದರ ನಂತರ ಚಿಕಿತ್ಸೆ ನೀಡಲಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಭಾನುವಾರವೇ ಅವರ ಅಂತ್ಯ ಸಂಸ್ಕಾರ ಅಬುದಾಬಿ ಮಸೀದಿಯಲ್ಲೇ ನಡೆಸಲಾಗಿದೆ.
ಮೃತ ವ್ಯಕ್ತಿಯ ಬಾವ ಅಬುದಾಬಿಯಲ್ಲಿದ್ದು, ಅಗತ್ಯ ದಾಖಲೆಗಳ ಸಂಗ್ರಹದಲ್ಲಿ ನಿರತರಾಗಿದ್ದಾರೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.