ಮಂಗಳೂರು, ಮೇ 19 (Daijiworld News/MB) : ಮಂಗಳೂರಿನಿಂದ ಬೆಂಗಳೂರು, ಮೈಸೂರು,ಶಿವಮೊಗ್ಗ, ಹುಬ್ಬಳ್ಳಿಗೆ ಕೆಎಸ್ಆರ್ಟಿಸಿ ಬಸ್ ಸೇವೆ ಆರಂಭವಾಗಿದ್ದು ಮಂಗಳವಾರ ಬೆಳಿಗ್ಗೆ ಮಂಗಳೂರಿನಿಂದ ಬೆಂಗಳೂರಿಗೆ 29 ಪ್ರಯಾಣಿಕರನ್ನು ಹೊತ್ತು ಕೆಎಸ್ಆರ್ಟಿಸಿ ಬಸ್ ಸಂಚರಿಸಿದೆ.
ಇತರೆ ಜಿಲ್ಲೆಗಳಿಗೆ ಸಂಜೆ 7 ಗಂಟೆಯೊಳಗೆ ಎಲ್ಲಾ ಬಸ್ಸು ತಲುಪಲು ವ್ಯವಸ್ಥೆ ಮಾಡಲಾಗಿದ್ದು 11 ಗಂಟೆಯಿಂದ ಯಾವುದೇ ಬಸ್ಸುಗಳು ಮಂಗಳೂರಿನಿಂದ ಬೆಂಗಳೂರಿಗೆ ಸಂಚರಿಸುವುದಿಲ್ಲ. ಹಾಗೆಯೇ ಗರ್ಭಿಣಿಯರು, 60 ವರ್ಷ ಮೇಲ್ಪಟ್ಟ,10 ವರ್ಷದ ಕೆಳಗಿನವರಿಗೆ ಪ್ರಯಾಣಕ್ಕೆ ಅವಕಾಶವಿಲ್ಲ.
ದ.ಕ.ಜಿಲ್ಲೆಯೊಳಗಡೆ ಇಂದು ಯಾವುದೇ ಬಸ್ಸುಗಳು ಓಡಾಡುವುದಿಲ್ಲ. ಇತರೆ ಜಿಲ್ಲೆಗಳಿಗೆ ಹಂತ ಹಂತವಾಗಿ ಬಸ್ ಸಂಚಾರ ಆರಂಭ ಮಾಡಲಾಗುತ್ತದೆ ಎಂದು ತಿಳಿದು ಬಂದಿದೆ.
ಮಂಗಳೂರಿನಿಂದ 45 ಬಸ್ಗಳು ನಾಲ್ಕು ಜಿಲ್ಲೆಗಳಿಗೆ ಹೊರಡಲಿದ್ದು ನಾಲ್ಕು ಜಿಲ್ಲೆಗಳಿಗೆ ಬಸ್ ಸಂಚಾರ ಆರಂಭವಾದ ಹಿನ್ನಲೆಯಲ್ಲಿ ಕೆಎಸ್ಆರ್ಟಿಸಿ ಬಸ್ ನಿಲ್ದಾಣಕ್ಕೆ ಜನರು ಆಗಮಿಸುತ್ತಿದ್ದು ಬಸ್ ಟಿಕೆಟ್ಗಾಗಿ ಕ್ಯೂ ನಿಂತಿದ್ದಾರೆ. ಒಂದು ಬಸ್ನಲ್ಲಿ 30 ಮಂದಿ ಪ್ರಯಾಣಿಸಲು ಅವಕಾಶವಿದ್ದು 30 ಮಂದಿ ಬಂದಲ್ಲಿ ಮಾತ್ರವೇ ಬಸ್ ಸಂಚಾರ ಆರಂಭಿಸಲಾಗುವುದು ಎಂದು ತಿಳಿದು ಬಂದಿದೆ.