ಮಂಗಳೂರು, ಮೇ 19 (Daijiworld News/MB) : ಲಾಕ್ಡೌನ್ ಕಾರಣದಿಂದಾಗಿ ಹಲವು ಉದ್ಯಮಗಳಿಗೆ ಸಾಕಷ್ಟು ನಷ್ಟ ಉಂಟಾಗಿದೆ. ಹೊಟೇಲ್ ಉದ್ಯಮಕ್ಕೂ ಕೋಟ್ಯಾಂತರ ರೂಪಾಯಿ ನಷ್ಟ ಉಂಟಾಗಿದ್ದು ಈ ಹಿನ್ನಲೆಯಲ್ಲಿ ಲಾಕ್ಡೌನ್ ಅವಧಿ ಪೂರ್ಣಗೊಂಡ ಬಳಿಕ ಹೊಟೇಲ್ ಖಾದ್ಯಗಳ ದರ ಹೆಚ್ಚಳ ಮಾಡುವ ಕುರಿತಾಗಿ ಹೊಟೇಲ್ ಮಾಲಕರ ಸಂಘ ಚಿಂತನೆ ನಡೆಸಿದೆ.
ಪ್ರಸ್ತುತ ಹೋಟೆಲ್ಗಳಿಗೆ ಪಾರ್ಸೆಲ್ ನೀಡುವ ಅವಕಾಶ ನೀಡಲಾಗಿದ್ದರೂ ನಷ್ಟ ಉಂಟಾಗುತ್ತಿದೆ. ಸಾರ್ವಜನಿಕರು ಈ ಸಂದರ್ಭದಲ್ಲಿ ಯಾವ ತಿಂಡಿಗಳನ್ನು ಖರೀದಿಸಬಹುದು ಎಂಬುದನ್ನು ತಿಳಿಯುವುದೇ ಹೊಟೇಲ್ ಉದ್ಯಮಿಗಳಿಗೆ ಕಷ್ಟವಾಗಿದ್ದು ಪ್ರತಿದಿನ ತಿಂಡಿಗಳು ಖರೀದಿಯಾಗದೆ ಹಾಳಾಗುತ್ತಿದೆ ಎನ್ನಲಾಗಿದೆ.
ಈ ಕೊರೊನಾ ಲಾಕ್ಡೌನ್ ಸಂದರ್ಭದಲ್ಲಿ ಉಂಟಾಗಿರುವ ನಷ್ಟವನ್ನು ಸರಿದೂಗಿಸುವ ನಿಟ್ಟಿನಲ್ಲಿ ಹೊಟೇಲ್ ತಿಂಡಿ ತಿನಿಸು ದರದಲ್ಲಿ ಶೇ. 10 ರಿಂದ 20 ರಷ್ಟು ಏರಿಕೆ ಮಾಡುವ ಸಾಧ್ಯತೆಯಿದ್ದು ಗ್ರಾಹಕರಿಗೆ ಇದು ಹೊರೆಯಾದರೂ ಅನಿವಾರ್ಯವಾಗಿದೆ ಎಂದು ಮಾಲಕರು ತಿಳಿಸಿದ್ದಾರೆ.
ಈ ಕುರಿತಾಗಿ ಮಾಹಿತಿ ನೀಡಿರುವ ಹೊಟೇಲ್ ಮಾಲಕರ ಸಂಘದ ಅಧ್ಯಕ್ಷ ಕುಡ್ಪಿ ಜಗದೀಶ್ ಶೆಟ್ಟಿ, ಕೊರೊನಾ ಲಾಕ್ಡೌನ್ನಿಂದಾಗಿ ಹೊಟೇಲ್ ಉದ್ಯಮಿಗಳು ಕೂಡಾ ಕೋಟ್ಯಾಂತರ ರೂಪಾಯಿ ನಷ್ಟ ಅನುಭವಿಸಿದ್ದಾರೆ. ಈ ನಷ್ಟವನ್ನು ಸರಿದೂಗಿಸಬೇಕಾದ್ದಲ್ಲಿ ತಿಂಡಿ ತಿನಿಸುಗಳ ದರ ಪರಿಷ್ಕರಣೆ ಮಾಡುವುದು ಅನಿವಾರ್ಯವಾಗಿದೆ. ಇನ್ನು ಕೆಲವು ಹೊಟೇಲ್ಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದ ಕಾರ್ಮಿಕರು ತಮ್ಮ ಊರುಗಳಿಗೆ ತೆರಳಿದ್ದಾರೆ. ಈ ಕಾರಣದಿಂದಾಗಿ ಕೆಲವು ಹೊಟೇಲ್ಗಳು ಮುಚ್ಚಬಹುದು ಎಂದು ತಿಳಿಸಿದ್ದಾರೆ.
ಸದ್ಯ ಬೆಳಿಗ್ಗೆ 7 ರಿಂದ ರಾತ್ರಿ 7 ರವರೆಗೆ ಹೊಟೇಲ್ಗಳಲ್ಲಿ ಪಾರ್ಸೆಲ್ ನೀಡಲು ಅವಕಾಶವಿದೆ. ರಾತ್ರಿಯಲ್ಲಿ ಸಾಮಾನ್ಯವಾಗಿ ಜನರು 9 ಗಂಟೆಯ ಬಳಿಕ ಊಟ ಮಾಡುತ್ತಾರೆ. ಆದರೆ ಆ ಸಮಯದಲ್ಲಿ ಪಾರ್ಸೆಲ್ಗೆ ಅವಕಾಶವಿಲ್ಲ. 7 ಗಂಟೆಗೆ ಊಟವನ್ನು ಪಾರ್ಸೆಲ್ ಪಡೆಯುವುದಿಲ್ಲ. ಇನ್ನು ಹೊಟೇಲ್ ಮಾಲಕರು ಆನ್ಲೈನ್ ಡೆಲಿವರಿ ಮಾಡುವವರಿಗೂ ಶೇಕಡಾವಾರು ಹಣ ನೀಡಬೇಕು. ಹಾಗಾಗಿ ಪಾರ್ಸೆಲ್ಗೆ ಅವಕಾಶ ನೀಡಿದರೂ ನಷ್ಟವೇ ಉಂಟಾಗುತ್ತದೆ ಎಂದು ಹೊಟೇಲ್ ಮಾಲಕರು ಹೇಳುತ್ತಾರೆ.
ಇನ್ನು ಲಾಕ್ಡೌನ್ ಕಾರಣದಿಂದಾಗಿ ಹೆಚ್ಚಿನ ಹೊಟೇಲ್ಗಳನ್ನು ಬಂದ್ ಮಾಡಲಾಗಿದೆ. ಈಗ ಇಲಿ- ಹೆಗ್ಗಣಗಳ ಕಾಟ ಹೆಚ್ಚಾಗಿದ್ದು ಹೊಟೇಲ್ನಲ್ಲಿರುವ ಸಾಮಾಗ್ರಿಗಳೆಲ್ಲಾ ಹಾಳಾಗುತ್ತಿದೆ. ಈ ಕಾರಣದಿಂದಾಗಿ ಸುಮಾರು 15 ದಿನಗಳಿಗೊಮ್ಮೆ ಹೊಟೇಲ್ ತೆರೆದು ಸ್ವಚ್ಛ ಮಾಡುವುದು ಅನಿವಾರ್ಯವಾಗಿದೆ ಎಂದು ಹೊಟೇಲ್ ಮಾಲಕರು ಕಷ್ಟ ಹಂಚಿಕೊಂಡಿದ್ದಾರೆ.