ಮಂಗಳೂರು, ಮೇ 19 (DaijiworldNews/SM): ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜು ಆಸ್ಪತ್ರೆಯ ಪ್ರಯೋಗಾಲಯವು ಕೋವಿಡ್ ರೋಗ ಹರಡುವ ವೈರಸನ್ನು ಪರೀಕ್ಷಿಸಲು ಮೇ 19ರಂದು ಐಸಿಎಂಆರ್ ಅನುಮೋದನೆಯನ್ನು ನೀಡಿದೆ.
ಸಾಂಕ್ರಾಮಿಕ ಹಿನ್ನಲೆಯಲ್ಲಿ ಕೋವಿಡ್-19ಗಾಗಿ ಆರ್ ಟಿ-ಪಿಸಿಆರ್ ಪರೀಕ್ಷೆಯನ್ನು ಪ್ರಾರಂಭಿಸಲು ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜು ಆಸ್ಪತ್ರೆ ನಿಮ್ಹಾನ್ಸ್ ಬೆಂಗಳೂರು ಮಾರ್ಗದರ್ಶಿ ಕೇಂದ್ರದಿಂದ ಕಿರುಪಟ್ಟಿ ಪಡೆದ ಕೇಂದ್ರಗಳಲ್ಲಿ ಒಂದಾಗಿದೆ.
ಫಾದರ್ ಮುಲ್ಲರ್ ಚಾರಿಟೇಬಲ್ ಸಂಸ್ಥೆಯ ಮೈಕ್ರೋಬಯೊಲಾಜಿ ವಿಭಾಗದ ಪ್ರಾಧ್ಯಾಪಕ ಡಾ. ಅನುಪ್ ಕುಮಾರ್ ಅವರು ಲಾಕ್ ಡೌನ್ ಸಮಯದಲ್ಲಿ ಸಹ ಈ ಉದ್ದೇಶಕ್ಕಾಗಿ ಬೆಂಗಳೂರಿನ ನಿಮ್ಹಾನ್ಸ್ನಲ್ಲಿ ತರಬೇತಿಯನ್ನು ಪಡೆದಿದ್ದಾರೆ.
ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜು ಆಸ್ಪತ್ರೆ ಪ್ರಯೋಗಾಲಯವು ಪರೀಕ್ಷೆ ಮತ್ತು ಮಾಪನಾಂಕ ನಿರ್ಣಯ ಪ್ರಯೋಗಾಲಯಗಳ ರಾಷ್ಟ್ರೀಯ ಮಾನ್ಯತ ಮಂಡಳಿ 2012ರಿಂದ ಮಾನ್ಯತೆ ಪಡೆದಿದೆ ಮತ್ತು ಈಗಾಗಲೇ ಆರ್ಟಿ-ಪಿಸಿಆರ್ ಪರೀಕ್ಷೆಗೆ ಅತ್ಯಾಧುನಿಕ ಸೌಲಭ್ಯವನ್ನು ಹೊಂದಿದೆ. ಲ್ಯಾಬ್ ಮೊದಲು ನಿಮ್ಹ್ಯಾನ್ಸ್ ಪ್ರಾವೀಣ್ಯತೆಯ ಪರೀಕ್ಷೆಯಲ್ಲಿ ಭಾಗವಹಿಸಿತು. ಮತ್ತು ನಂತರ ಅಂತಿಮ ಐಸಿಎಂಆರ್ ಅನುಮೋದನೆ ಪಡೆಯುವ ಮೊದಲು ಪರೀಕ್ಷೆಗಳ ವ್ಯಾಪ್ತಿಯಲ್ಲಿ ಎಸ್ ಎ ಆರ್ ಎಸ್-ಸಿಒವಿ-2 ಆರ್ ಟಿ-ಪಿಸಿಆರ್ ಅನ್ನು ಸೇರಿಸಲು ಎನ್ ಎಬಿಎಲ್ ಮೌಲ್ಯ ಮಾಪನದಲ್ಲಿ ಭಾಗವಹಿಸಿತ್ತು.
ಪ್ರಯೋಗಾಲಯವು ರಾಷ್ಟ್ರೀಯ, ಅಂತರಾಷ್ಟ್ರೀಯ ಗುಣಮಟ್ಟದ ಮಾರ್ಗ ಸೂಚಿಗಳನ್ನು ಅನುಸರಿಸಿದೆ. ಪ್ರಾವೀಣ್ಯತೆಯ ಪರೀಕ್ಷೆಯಲ್ಲಿ ಭಾಗವಹಿಸಿದೆ. ಉಪಕರಣಗಳ ಆವರ್ತಕ ಮಾಪಾನಾಂಕ ನಿರ್ಣಯವನ್ನು ಮಾಡಿದೆ ಮತ್ತು ಕಟ್ಟುನಿಟ್ಟಾದ ಸುರಕ್ಷತಾ ಮುನ್ನೆಚ್ಚರಿಕೆಗಳು ಮತ್ತು ಬಯೋಮೆಡಿಕಲ್ ತ್ಯಾಜ್ಯ ನಿರ್ವಹಣೆಯನ್ನು ಅನುಸರಿಸಿದೆ. ಬೋಧಕವರ್ಗ, ಸಿಬ್ಬಂದಿ ಮತ್ತು ದತ್ತಾಂಶ ನಿರ್ವಾಹಕರು ಉತ್ತಮ ತರಭೇತಿ ಪಡೆದ ತಂಡವಾಗಿದ್ದು ವೈದ್ಯಕೀಯ ಪರೀಕ್ಷೆಯಲ್ಲಿ ಉನ್ನತ ಗುಣಮಟ್ಟವನ್ನು ತಲುಪಲು ತಮ್ಮ ಶ್ರಮವನ್ನು ಹಾಕಿದ್ದಾರೆ. ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜು ಆಸ್ಪತ್ರೆ ಈಗಾಗಲೇ ಎನ್ ಎಬಿಹೆಚ್ ಮಾನ್ಯತೆ ಪಡೆದಿದೆ ಮತ್ತು ವೈದ್ಯಕೀಯ ಕಾಲೇಜು ನ್ಯಾಕ್ ಮಾನ್ಯತೆ ಪಡೆದಿದೆ.
ಸಾಂಕ್ರಾಮಿಕ ರೋಗದ ಹಿನ್ನಲೆಯಲ್ಲಿ ಆಸ್ಪತ್ರೆಯ ಐಸೋಲೇಶನ್ ವಾರ್ಡ್ ಮತ್ತು ಸಾಕಷ್ಟು ವೆಂಟಿಲೇಟರ್ ಗಳನ್ನು, ಸಿಬ್ಬಂದಿಗಳಿಗಾಗಿ ಅಗತ್ಯ ಪಿಪಿಇ ಗಳನ್ನು ತಯಾರಿ ಮಾಡಿರಿಸಲಾಗಿದೆ. ಜಿಲ್ಲಾ ಅಧಿಕಾರಿಗಳ ಮೇಲ್ವಿಚಾರಣೆಯಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರವು ನಿಗದಿಪಡಿಸಿದ ಪ್ರೊಟೊಕಾಲ್ ಬಗ್ಗೆ ಸಿಬ್ಬಂದಿಗಳಿಗೆ ವಿವರಿಸಲಾಗಿದೆ. ಸಾಂಕ್ರಾಮಿಕ ರೋಗದ ಹಿನ್ನಲೆಯಲ್ಲಿ ಡಾ. ಉದಯ್ ಕುಮಾರ್ ವೈದ್ಯಕೀಯ ಅಧಿಕ್ಷಕ ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜು ಆಸ್ಪತ್ರೆ ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದು ಆಸ್ಪತ್ರೆಯ ಸೇವೆಯನ್ನು ಜಿಲ್ಲೆಗೆ ವಿಸ್ತರಿಸಲಾಗಿದೆ. ಮಾದರಿ ಸಂಗ್ರಹಕ್ಕಾಗಿ ಮೀಸಲಾದ ಕಿಯೋಸ್ಕ್ ಆಸ್ಪತ್ರೆಯಲ್ಲಿ ಹೊರ ರೋಗಿಗಳಿಗೆ ಲಭ್ಯವಿದೆ. ಮಾದರಿಗಳನ್ನು ಸರಿಯಾದ ಕೋಲ್ಡ್ ಚೈನ್ ಮತ್ತು ಸುರಕ್ಷತಾ ಪ್ರೊಟೋಕಾಲ್ಗಳ ಮೂಲಕ ಲ್ಯಾಬ್ಗೆ ಸಾಗಿಸಲಾಗುತ್ತದೆ.
ಸಂಸ್ಥೆಯ ಆಡಳಿತ ವರ್ಗ, ಅಧ್ಯಕ್ಷ, ಮಂಗಳೂರು ಬಿಷಪ್ ವಂದನೀಯ ಫಾ. ಪೀಟರ್ ಪೌಲ್ ಸಲ್ಡಾನ, ಸಂಸ್ಥೆಯ ನಿರ್ದೇಶಕರು ಫಾ. ರಿಚರ್ಡ್ ಎಲೋಶಿಯಸ್ ಕುವ್ಹೆಲ್ಲೊ, ಸಂಸ್ಥೆಯ ಅಭಿವೃದ್ದಿಗೆ ನಿರ್ದೇಶನ ನೀಡಿರುತ್ತಾರೆ.
ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜು ಆಸ್ಪತ್ರೆಯ ಆಡಳಿತಧಿಕಾರಿ ಫಾ. ರುಡಾಲ್ಫ್ ರವಿ ಡೆಸಾ ರವರು ಲ್ಯಾಬ್ನ ಉಪಕರಣಗಳನ್ನು ಸಂಗ್ರಹಿಸಲು ಮತ್ತು ಅಗತ್ಯವಾದ ಪ್ರೊಟೊಕಾಲ್ ಹಾಕಲು ಸಹಕರಿಸಿರುತ್ತಾರೆ. ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜಿನ ಆಡಳಿತಧಿಕಾರಿ ಫಾ. ಅಜಿತ್ ಮಿನೆಜಸ್ರವರು ಲ್ಯಾಬ್ಗೆ ಅಗತ್ಯವಿರುವ ಮೂಲ ಸೌಕರ್ಯಗಳನ್ನು ಪೂರೈಕೆಯ ಉಸ್ತುವಾರಿಯನ್ನು ವಹಿಸಿರುತ್ತಾರೆ.