ಉಡುಪಿ, ಮೇ 20 (Daijiworld News/MSP): ಉಡುಪಿ ಜಿಲ್ಲೆಗೆ ಹೊರ ಜಿಲ್ಲೆ, ರಾಜ್ಯ ಮತ್ತು ವಿದೇಶಗಳಿಂದ 7000 ಕ್ಕೂ ಅಧಿಕಮಂದಿ ಆಗಮಿಸಿದ್ದು, ಎಲ್ಲರನ್ನೂ ಕ್ವಾರಂಟೈನ್ಗೆ ಒಳಪಡಿಸಲಾಗಿದ್ದು, ಸ್ಥಳೀಯವಾಗಿ ಸಮುದಾಯದಲ್ಲಿ ಕೋವಡ್ 19 ಹರಡದಂತೆ ಎಚ್ಚರವಹಿಸಲಾಗಿದೆ ಎಂದು ಶಾಸಕ ರಘುಪತಿಭಟ್ ತಿಳಿಸಿದ್ದಾರೆ.
ಅವರು, ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ , ಉಡುಪಿ ಜಿಲ್ಲಾ ಸರಕಾರಿ ನೌಕರರ ಸಂಘದ ವತಿಯಿಂದ ನೀಡಿದ , ಉಡುಪಿ ತಾಲೂಕಿನಲ್ಲಿ ಕೋವಿಡ್ ಮಾದರಿ ಸಂಗ್ರಹಿಸುವ ಸಂಚಾರಿ ವಾಹನಕ್ಕೆ ಹಸಿರು ನಿಶಾನೆ ತೋರಿಸಿ ಮಾತನಾಡಿದರು.
ಜಿಲ್ಲೆಯಲ್ಲಿ ಪ್ರಸ್ತುತ ಕಂಡು ಬಂದಿರುವ 12 ಪಾಸಿಟಿವ್ ಪ್ರಕರಣಗಳು ಹೊರರಾಜ್ಯ ಮತ್ತು ವಿದೇಶದಿಂದ ಬಂದ ಪ್ರಯಾಣಿಕರಿಂದ ಬಂದಿದ್ದು, ಅವರು ಜಿಲ್ಲೆಗೆ ಬಂದ ಕೂಡಲೇ ಕ್ವಾರಂಟೈನ್ಗೆ ಒಳಪಡಿಸಿರುವ ಕಾರಣ , ಸಮುದಾಯಕ್ಕೆ ಕೋವಿಡ್ ಹರಡಿಲ್ಲ, ಜಿಲ್ಲೆಯ ಎಲ್ಲಾ ಸರಕಾರತಿ ನೌಕರರು ಮತ್ತು ಜನಪ್ರತಿನಿಧಿಗಳು ಒಂದು ತಂಡವಾಗಿ ಕೆಲಸ ಮಾಡುತ್ತಿರುವುದರಿಂದ ಕೋವಿಡ್ ಹರಡುವಿಕೆ ನಿಯಂತ್ರಣದಲ್ಲಿದೆ, ಕ್ವಾರಂಟೈನ್ ಕೇಂದ್ರಗಳಲ್ಲಿರುವವರನ್ನು ಬಿಡುಗಡೆಗೊಳಿಸುವ ಮೊದಲು ಅವರ ಗಂಟಲ ಸ್ರಾವ ಸಂಗ್ರಹಿಸಬೇಕಿದ್ದು, ಈ ಸಂಚಾರಿ ವಾಹನಗಳ ಮೂಲಕ ಸುಲಭವಾಗಿ ಮತ್ತು ಸುರಕ್ಷಿತವಾಗಿ ಶೀಘ್ರದಲ್ಲಿ ಗಂಟಲ ಸ್ರಾವ ತೆಗೆಯಲು ಅನುಕೂಲವಾಗುತ್ತದೆ ಎಂದು ಶಾಸಕ ರಘುಪತಿಭಟ್ ಹೇಳಿದರು.
ಕಾರ್ಕಳ ತಾಲೂಕಿನಲ್ಲಿ ಕೋವಿಡ್ ಮಾದರಿ ಸಂಗ್ರಹಿಸುವ ಸಂಚಾರಿ ವಾಹನಕ್ಕೆ ಹಸಿರು ನಿಶಾನೆ ತೋರಿಸಿ ಮಾತನಾಡಿದ, ಜಿಲ್ಲಾಧಿಕಾರಿ ಜಿ.ಜಗದೀಶ್ ಮಾತನಾಡಿ, ರಾಜ್ಯ ಸರ್ಕಾರವು ಮಹಾರಾಷ್ಟ, ತಮಿಳುನಾತು, ಗುಜರಾತ್ ಮತ್ತು ಕೇರಳ ರಾಜ್ಯದಿಂದ ಬರುವ ಪ್ರಯಾಣಿಕರಾಗಿ ಮೇ 31 ರ ವರೆಗೆ ನಿರ್ಬಂದ ವಿಧಿಸಿರುವುದರಿಂದ ಜಿಲ್ಲೆಗೆ ಹೊರರಾಜ್ಯದಿಂದ ಬರುವ ಪ್ರಯಾಣಿಕರ ಸಂಖ್ಯೆ ಕಡಿಮೆ ಆಗಿದೆ, ಜಿಲ್ಲೆಗೆ ಮಹಾರಾಷ್ಟ್ರದಿಂದ ಹೆಚ್ಚಿನ ಸಂಖ್ಯೆಯಲ್ಲಿ ಜಿಲ್ಲೆಯ ನಾಗರೀಕರು ಆಗಮಿಸಿದ್ದು, ಅವರನ್ನು ಕ್ವಾರಂಟೈನ್ ಕೇಂದ್ರಗಳಲ್ಲಿ ಇಡಲಾಗಿದೆ,ಈಗಾಗಲೇ ಕುಂದಾಪುರ ತಾಲೂಕಿನಲ್ಲಿ ಒಂದು ಸಂಚಾರಿ ಕೋವಿಡ್ ಮಾದರಿ ಸಂಗ್ರಹ ವಾಹನವಿದ್ದು, ಪ್ರಸ್ತುತ ಉಡುಪಿ ಮತ್ತು ಕಾರ್ಕಳ ತಾಲೂಕಿಗೆ ವಾಹನ ದೊರೆತಿರುವುದರಿಂದ ಕ್ವಾರಂಟೈನ್ ಕೇಂದ್ರಗಳಲ್ಲಿರುವವರ ಗಂಟಲ ಸ್ರಾವ ಸಂಗ್ರಹ ಸುಲಭವಾಗಲಿದೆ ಎಂದರು.
ಉಡುಪಿ ಜಿಲ್ಲಾ ಸರಕಾರಿ ನೌಕರರ ಸಂಘದ ಅಧ್ಯಕ್ಷ ಸುಬ್ರಹ್ಮಣ್ಯ ಶೇರಿಗಾರ್ ಮಾತನಾಡಿ, ಪ್ರತಿಯೊಂದು ಸಂಚಾರಿ ಮಾದರಿ ಸಂಗ್ರಹ ವಾಹನಕ್ಕೆ ರೂ.30000 ಗಳ ವೆಚ್ಚವಾಗಿದ್ದು, ಈ ಮೊತ್ತವನ್ನು ದಾನಿಗಳ ನೆರವಿನಿಂದ ಸಂಗ್ರಹಿಸಲಾಗಿದೆ. ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿ ಈ ಸಂಚಾರಿ ವಾಹನದ ಮೂಲಕ ಸ್ವಾಬ್ ಸಂಗ್ರಹ ನಡೆಯಲಿದೆ , ಉಡುಪಿಯ ವಾಹನಕ್ಕೆ ಇಬ್ರಾಹಿಂ ಗೋವಾ ಹಾಗೂ ಕಾರ್ಕಳದ ವಾಹನಕ್ಕೆ ನಿತಿನ್ ಶೆಟ್ಟಿ ಹಾಗೂ ಅಬ್ದಲ್ ರೆಹಮಾನ್ ಆರ್ಥಿಕ ನೆರವು ನೀಡಿದ್ದಾರೆ. ಈಗಾಗಲೇ ಸರಕಾರಿ ನೌಕರರ ಒಂದು ದಿನದ ವೇತನವನ್ನು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ನೀಡಲಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಸಿಇಓ ಪ್ರೀತಿ ಗೆಹಲೋತ್, ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು, ಡಿಹೆಚ್ಓ ಡಾ. ಸುಧೀರ್ ಚಂದ್ರ ಸೂಡಾ, ಜಿಲ್ಲಾ ಕೋವಿಡ್ ನೋಡೆಲ್ ಅಧಿಕಾರಿ ಡಾ. ಪ್ರಶಾಂತ್ ಭಟ್, ಜಿಲ್ಲಾ ಸರಕಾರಿ ನೌಕರರ ಸಂಘದ ಉಪಾಧ್ಯಕ್ಷ ಪ್ರಶಾಂತ್ ಶೆಟ್ಟಿ ಹಾವಂಜೆ, ಖಜಾಂಚಿ ಚಂದ್ರಶೇಖರ್, ರಾಜ್ಯ ಪರಿಷತ್ ಸದಸ್ಯ ಕಿರಣ್ ಹೆಗ್ಡೆ, ದಿವಾಕರ ಖಾರ್ವಿ, ರವಿ ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು.