ಮಂಗಳೂರು, ಮೇ 20 (Daijiworld News/MSP): ಲಾಕ್ ಡೌನ್ ಆರಂಭವಾಗಿ ಸುಮಾರು ಎರಡು ತಿಂಗಳ ಬಳಿಕ ಕೆ.ಎಸ್.ಆರ್.ಟಿ.ಸಿ ಬಸ್ ಬಸ್ ಸಂಚಾರ ಆರಂಭವಾಗಿದ್ದು , ಮಂಗಳೂರು ಮತ್ತು ಪುತ್ತೂರು ವಿಭಾಗಗಳಿಂದ ಮೊದಲ ದಿನ 86 ಬಸ್ ಗಳು ಸಂಚರಿಸಿದವು.
ಇನ್ನು ಮಂಗಳವಾರಕ್ಕೆ ಹೋಲಿಸಿದ್ರೆ ಬುಧವಾರ ಬೆಳಗ್ಗಿನಿಂದಲೇ ಪ್ರಯಾಣಿಕರ ಸಂಖ್ಯೆಯಲ್ಲಿ ಹೆಚ್ಚಳ ಕಂಡುಬಂತು. ಮಂಗಳೂರಿನ ಬಿಜೈನಲ್ಲಿರುವ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದಲ್ಲಿ ದೂರದ ಊರುಗಳಿಗೆ ತೆರಳುತ್ತಿರುವ ಪ್ರಯಾಣಿಕರು ಸರತಿ ಸಾಲಿನಲ್ಲಿ ನಿಂತು ಬಸ್ ನಿಲ್ದಾಣದ ಒಳಗೆ ಆಗಮಿಸುತ್ತಿರುವ ದೃಶ್ಯ ಸಾಮಾನ್ಯವಾಗಿತ್ತು.
ಇದಲ್ಲದೇ ಮಂಗಳೂರು ನಗರದೊಳಗೆ ಇಂದಿನಿಂದ ಅಗತ್ಯವಿರುವ ಕೆ.ಎಸ್.ಆರ್.ಟಿ.ಸಿ ಬಸ್ ನರ್ಮ್ ಬಸ್ ಗಳ ಸಂಚಾರವನ್ನು ಆರಂಭಿಸುವ ಸಾಧ್ಯತೆ ಇದೆ. ನರ್ಮ್ ಬಸ್ ಗಳನ್ನು ಹಂತ ಹಂತವಾಗಿ ಆರಂಭಿಸುವ ಬಗ್ಗೆ ಕೆ.ಎಸ್.ಆರ್.ಟಿ.ಸಿ ಅಧಿಕಾರಿಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಕೋಟಾ ಶ್ರೀನಿವಾಸ್ ಪೂಜಾರಿ ಸೂಚಿಸಿದ್ದಾರೆ.