ಮಂಗಳೂರು, ಮೇ 20 (Daijiworld News/MB) : ಮಂಗಳವಾರ ಸಂಜೆ 5 ರಿಂದ ಬುಧವಾರ ಮಧ್ಯಾಹ್ನ 12 ರವರೆಗೆ ಉಡುಪಿಯಲ್ಲಿ 6 ಜನರಿಗೆ ಹಾಗೂ ದ.ಕ.ಜಿಲ್ಲೆಯಲ್ಲಿ ಒಬ್ಬರಿಗೆ ಕೊರೊನಾ ಪಾಸಿಟಿವ್ ಆಗಿದೆ.
ಮಂಗಳೂರಿನ ನೀರುಮಾರ್ಗ ನಿವಾಸಿ 40 ವರ್ಷದ ಮಹಿಳೆಯಲ್ಲಿ ಕೊರೊನಾ ಸೋಂಕು ಪತ್ತೆಯಾಗಿದ್ದು ಈ ಮಹಿಳೆ ಕುಡುಪು ಮತ್ತು ಕುಟ್ಟಿಕಲದಲ್ಲಿನ ಮನೆಯಲ್ಲಿ ಇದ್ದ ಬಗ್ಗೆ ಮಾಹಿತಿ ದೊರೆತಿದೆ. ಇದೀಗ ಈ ಮಹಿಳೆ ಒಂದು ವಾರಗಳ ಕಾಲ ಇದ್ದ ಪ್ರದೇಶವೆಲ್ಲವನ್ನೂ ಸೀಲ್ಡೌನ್ ಮಾಡುವ ಸಾಧ್ಯತೆಯಿದೆ.
ಮಹಿಳೆಯು ಮೇ.10 ರಂದು ಕಾರಿನಲ್ಲಿ ತನ್ನ ಮಗನೊಂದಿಗೆ ಬೆಂಗಳೂರಿನ ರಾಜಾಜಿನಗರದಿಂದ ಮಂಗಳೂರಿಗೆ ಬಂದಿದ್ದು ಅಸ್ತಮ ಮತ್ತು ಬಿಪಿಯಿಂದಾಗಿ ಮೇ.17 ರಂದು ವೆನ್ಲಾಕ್ ಆಸ್ಪತ್ರೆಗೆ ದಾಖಲಾಗಿದ್ದರು.
ಉಡುಪಿಯಲ್ಲಿ ಒಟ್ಟು ಆರು ಜನರಲ್ಲಿ ಕೊರೊನಾ ದೃಢಪಟ್ಟಿದ್ದು ಸೋಂಕಿತರ ಸಂಖ್ಯೆ 21 ಕ್ಕೆ ಏರಿಕೆಯಾಗಿದೆ. ಒಟ್ಟು ಮೂವರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು ಕೊರೊನಾದಿಂದಾಗಿ ಒಬ್ಬರು ಸಾವನ್ನಪ್ಪಿದ್ದಾರೆ.
ದ.ಕ. ಜಿಲ್ಲೆಯಲ್ಲಿ ಈವರೆಗೆ 48 ಜನರಿಗೆ ಕೊರೊನಾ ಸೋಂಕು ತಗುಲಿದ್ದು ಒಟ್ಟು 11 ಮಂದಿ ಗುಣಮುಖರಾಗಿದ್ದಾರೆ. 5 ಮಂದಿ ಕೊರೊನಾಗೆ ಬಲಿಯಾಗಿದ್ದಾರೆ.