ಮಂಗಳೂರು, ಮೇ 20 (DaijiworldNews/PY) : ಆಳಸಮುದ್ರ ಬೋಟೊಂದು ಮಲ್ಪೆ ಬಂದರಿಗೆ ಮೀನುಗಾರಿಕೆ ಮುಗಿಸಿ ವಾಪಾಸ್ಸಾಗುತ್ತಿದ್ದ ಸಂದರ್ಭ ಮಲ್ಪೆ ಸಮೀಪದ ಬಂಡೆಗೆ ಬಡಿದು ಮುಳುಗಡೆಗೊಂಡಿದ್ದು, ದೋಣಿಯಲ್ಲಿದ್ದ ಆರು ಮೀನುಗಾರರನ್ನು ರಕ್ಷಣೆ ಮಾಡಲಾಗಿದೆ.
ಸಾಂದರ್ಭಿಕ ಚಿತ್ರ
ಮೇ 14ರಂದು ರೇಷ್ಮಾ ಖಾರ್ವಿ ಅವರಿಗೆ ಸೇರಿದ್ದ ಶ್ರೀ ಸ್ವರ್ಣಾರಾಜ್ ಬೋಟು ಮಲ್ಪೆ ಬಂದಿರಿನಿಂದ ರಾತ್ರಿ 10-30ಕ್ಕೆ ಮೀನುಗಾರಿಕೆಗೆ ತೆರಳಿತ್ತು. ಮೇ 19ರಂದು ಮೀನುಗಾರಿಕೆ ಮುಗಿಸಿ ತಡರಾತ್ರಿ 1ಗಂಟೆಗೆ ಮಲ್ಪೆ ಬಂದರಿಗ ವಾಪಾಸ್ಸಾಗುತ್ತಿದ್ದ ವೇಳೆ ಮಲ್ಪೆ ಬಂದರಿಗೆ ಸುಮಾರು ಆರು ಮಾರು ಆಳ ದೂರದಲ್ಲಿ ಬೋಟಿನ ಸ್ಟೇರಿಂಗ್ ತುಂಡಾಗಿ, ಗಾಳಿಯ ರಭಸದಿಂದಾಗಿ ಬೋಟ್ ನಿಯಂತ್ರಿಸಲು ಆಗದೇ ಇದ್ದ ಕಾರಣ ಸಮೀಪದಲ್ಲಿದ್ದ ತೆಲ್ಕಲ್ ಬಂಡೆಗೆ ಬಡೆದಿದೆ.
ತೆಲ್ಕಲ್ ಬಂಡೆಗೆ ಬಡಿದ ಪರಿಣಾಮ ಬೋಟ್ಗೆ ಹಾನಿಯಾಗಿ, ಬೋಟ್ನ ಒಳಕ್ಕೆ ನೀರು ಹೊಕ್ಕು ಮುಳುಗಲಾರಂಭಿಸಿತು. ಈ ಸಂದರ್ಭ ಸಮೀಪದಲ್ಲಿದ್ದ ಪಂಡರಿತೀರ್ಥ ದೋಣಿಯವರು ತಕ್ಷಣವೇ ಧಾವಿಸಿದ್ದು, ಬೋಟ್ನಲ್ಲಿದ್ದ ಆರು ಮಂದಿ ಮೀನುಗಾರರನ್ನು ರಕ್ಷಿಸಿ ದಡಕ್ಕೆ ಸೇರಿಸಿದ್ದಾರೆ. ಬಳಿಕ ಶ್ರೀಚರಣ ಬೋಟ್ನ ಮೂಲಕ ಮುಳುಗಡೆಯಾಗುತ್ತಿದ್ದ ಬೋಟ್ ಅನ್ನು ರಕ್ಷಿಸಲು ಯತ್ನಿಸಿದರೂ ಬೋಟ್ ಅನ್ನು ರಕ್ಷಣೆ ಮಾಡಲಾಗಲಿಲ್ಲ.
ಬೋಟ್ನಲ್ಲಿದ್ದ ಸುಮಾರು ಸುಮಾರು 5 ಲಕ್ಷ ರೂ. ಮೌಲ್ಯದ ಮೀನು, ಡಿಸೇಲ್, ಬಲೆ ಸಮುದ್ರ ಪಾಲಾಗಿದ್ದು, ಸುಮಾರು 80ಲಕ್ಷ ರೂಪಾಯಿ ನಷ್ಟ ಉಂಟಾಗಿದೆ ಎಂದು ಅಂದಾಜಿಸಲಾಗಿದೆ.