ಮಂಗಳೂರು, ಮೇ 20 (DaijiworldNews/SM): ಮುಂಬೈನಿಂದ ಹೊರಟು ಕರಾವಳಿಗೆ ಆಗಮಿಸುತ್ತಿದ್ದ ಪ್ರಯಾಣಿಕರು ನಿಪ್ಪಾಣಿಯಲ್ಲಿ ಸಂಕಷ್ಟಕ್ಕೀಡಾದ ಬಗ್ಗೆ ದೈಜಿವರ್ಲ್ಡ್ ಮಾಡಿದ್ದ ವರದಿಗೆ ಇಂಪ್ಯಾಕ್ಟ್ ಸಿಕ್ಕಿದ್ದು, ಜನಪ್ರತಿನಿಧಿಗಳು ಜಿಲ್ಲಾಡಳಿತದ ಮುತುವರ್ಜಿಯಿಂದ ಎಲ್ಲಾ 32 ಪ್ರಯಾಣಿಕರು ಊರಿಗೆ ಮರಳುತ್ತಿದ್ದಾರೆ.
ಗರ್ಭಿಣಿ, ಹತ್ತು ತಿಂಗಳ ಮಗುಸೇರಿದಂತೆ 32 ಮಂದಿ ಪ್ರಯಾಣಿಕರು ಮುಂಬೈನಿಂದ ಬಸ್ ಮೂಲಕ ಕರಾವಳಿಗೆ ಆಗಮಿಸುತ್ತಿದ್ದರು. ಆದರೆ, ಬೆಳಗಾವಿ ಜಿಲ್ಲೆಯ ನಿಪ್ಪಾಣಿಯಲ್ಲಿ ಅವರನ್ನು ತಡೆಯಲಾಗಿತ್ತು. ಆದರೆ, ಇದೀಗ ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ್ ಪೂಜಾರಿ, ಜಿಲ್ಲಾಧಿಕಾರಿಗಳ ಮುತುವರ್ಜಿಯಿಂದ ಸಂಕಷ್ಟದಲ್ಲಿದ್ದವರು ಇದೀಗ ಊರಿಗೆ ಮರಳುತ್ತಿದ್ದಾರೆ.
ಮುಂಬೈನಿಂದ ಉಡುಪಿ ಹಾಗೂ ಮಂಗಳೂರಿಗೆ ಆಗಮಿಸುವ ಪ್ರಯಾಣಿಕರು ಏಜೆಂಟ್ ಒಬ್ಬರ ಮೂಲಕ ಟಿಕೆಟ್ ಬುಕ್ ಮಾಡಿ ಹಣ ಪಾವತಿಸಿ ಮುಂಬೈನಿಂದ ಹೊರಟಿದ್ದರು. ಸ್ವತಃ ಎಜೆಂಟರ್ ತಾನು ಸೇವಾ ಸಿಂಧೂ ಮೂಲಕ ಪಾಸ್ ಪಡೆದಿರುವ ಬಗ್ಗೆ ಪ್ರಯಾಣಿಕರಿಗೆ ತಿಳಿಸಿದ್ದ. ಬಳಿಕ ಮುಂಬೈನಿಂದ ಹೊರಟಿದ್ದ ಬಸ್ ಬೆಳಗಾವಿಯ ನಿಪ್ಪಾಣಿ ಟೋಲ್ ಗೇಟ್ ಸಮೀಪ ತಲುಪುತ್ತಿದ್ದಂತೆ ಬಸ್ ತಡೆಯಲಾಗಿದೆ. ಈ ಸಂದರ್ಭದಲ್ಲಿ ಸೇವಾ ಸಿಂಧೂ ಆಪ್ ನಲ್ಲಿ ನೋಂದಣಿ ಮಾಡಿರುವ ಪಾಸ್ ಬಗ್ಗೆ ವಿಚಾರಿಸಿದಾಗ. ಪಾಸ್ ಇಲ್ಲ ಎಂದು ಚಾಲಕ ತಿಳಿಸಿದ್ದಾನೆ. ಇದರಿಂದಾಗಿ ಟೋಲ್ ಗೇಟ್ ನಲ್ಲಿ ಬಸ್ ತಡೆಯಲಾಗಿದೆ.
ಸಂಕಷ್ಟದಲ್ಲಿದ್ದವರ ನೆರವಿಗೆ ಧಾವಿಸಿದ ದೈಜಿವರ್ಲ್ಡ್:
ಬಸ್ ತಡೆದಿರುವಿದರಿಂದ ಏಳು ತಿಂಗಳ ಗರ್ಭಿಣಿ, 10 ತಿಂಗಳ ಮಗು ಸೇರಿದಂತೆ ಸುಮಾರು 32 ಮಂದಿ ಕರಾವಳಿಯ ಪ್ರಯಾಣಿಕರು ಸಂಕಷ್ಟಕ್ಕೀಡಾಗಿದ್ದಾರೆ. ವಿಚಾರ ತಿಳಿಯುತ್ತಿದ್ದಂತೆ ನೇರ ಪ್ರಸಾರ ಆರಂಭಿಸಿದ ದೈಜಿವರ್ಲ್ಡ್, ದ.ಕ. ಜಿಲ್ಲಾ ಉಸ್ತುವಾರಿ ಸಚಿವರನ್ನು ಸಂಪರ್ಕಿಸಿ ವಿಚಾರವನ್ನು ತಿಳಿಸಲಾಗಿದೆ. ಈ ವೇಳೆ ಸ್ಪಂದಿಸಿದ ಸಚಿವರು, ಸಂಕಷ್ಟದಲ್ಲಿದ್ದವರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸುವ ಭರವಸೆ ನೀಡಿದ್ದಾರೆ.
ಧನ್ಯವಾದಗಳು ಜನಪ್ರತಿನಿಧಿಗಳಿಗೆ ಜಿಲ್ಲಾಡಳಿತಕ್ಕೆ:
ಇನ್ನು ವಿಚಾರ ತಿಳಿದ ಬಳಿಕ ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ್ ಪೂಜಾರಿ ಸಂಕಷ್ಟದಲ್ಲಿದ್ದವರ ನೆರವಿಗೆ ಧಾವಿಸಿದ್ದಾರೆ. ಸರಕಾರದ ಮಟ್ಟದಲ್ಲಿ ವಿಚಾರವನ್ನು ಚರ್ಚಿಸಿದ್ದಾರೆ. ಗೃಹ ಇಲಾಖೆಗೆ ಸುದ್ದಿ ಮುಟ್ಟಿಸಿದ್ದಾರೆ. ಬೆಳಗಾವಿ, ಉಡುಪಿ, ದ.ಕ. ಜಿಲ್ಲಾಧಿಕಾರಿಗಳನ್ನು ಸಂಪರ್ಕಿಸಿದ್ದಾರೆ. ಅವರೂ ಕೂಡ ಸಚಿವರಿಗೆ ಸಕಾರಾತ್ಮಕವಾಗಿ ಸ್ಪಂಧಿಸಿದ್ದಾರೆ. ಜತೆಗೆ ದ.ಕ. ಜಿಲ್ಲಾ ಸಂಸದ ನಳಿನ್ ಕುಮಾರ್, ಮೂಡುಬಿದಿರೆ ಶಾಸಕ ಉಮಾನಾಥ್ ಕೊಟ್ಯಾನ್ ಕೂಡ ಸಂಕಷ್ಟದಲ್ಲಿದ್ದವರನ್ನು ಊರಿಗೆ ಕರೆ ತರುವಲ್ಲಿ ಪ್ರಮುಖ ಪಾತ್ರವಹಿಸಿದ್ದು, ಜಿಲ್ಲಾಡಳಿತ ಜನಪ್ರತಿನಿಧಿಗಳ ಕಾರ್ಯಕ್ಕೆ ಪ್ರಯಾಣಿಕರು ಅಭಾರಿಯಾಗಿದ್ದಾರೆ.