ಕುಂದಾಪುರ, ಮೇ 20 (DaijiworldNews/SM): ಗಡಿಗಳಲ್ಲಿರುವ ಚೆಕ್ಪೋಸ್ಟ್ಗಳಲ್ಲಿ ಅಧಿಕಾರಿಗಳ ಕಣ್ತಪ್ಪಿಸಿ ಮಹಾರಾಷ್ಟ್ರದಿಂದ ಬಂದು ಮನೆ ಸೇರಲು ಯತ್ನಿಸಿದ ಯುವಕನೊಬ್ಬನನ್ನು ಮನೆಯವರು ಮತ್ತು ನೆರೆಹೊರೆಯವರು ಸೇರಿ ದಿಗ್ಬಂಧನಕ್ಕೆ ಕಳುಹಿಸುವ ಮೂಲಕ ಸಮಯಪ್ರಜ್ಞೆ ಮೆರೆದಿರುವ ಘಟನೆ ಕುಂದಾಪುರದಲ್ಲಿ ನಡೆದಿದೆ.
ಮಹಾರಾಷ್ಟ್ರದ ನಾಸಿಕ್ನಲ್ಲಿ ವೃತ್ತಿಯಲ್ಲಿದ್ದ ಯುವಕ ವಾಹನಗಳನ್ನೇರುತ್ತಾ ಜಿಲ್ಲೆಯ ಉತ್ತರ ಗಡಿಯ ಶಿರೂರು ಚೆಕ್ಪೋಸ್ಟ್ಗಿಂತ ಹಿಂದೆಯೇ ಇಳಿದುಕೊಂಡಿದ್ದಾನೆ. ಸ್ನೇಹಿತನಿಗೆ ಕರೆಮಾಡಿ ಬೈಕ್ ತರಿಸಿಕೊಂಡು ಚೆಕ್ಪೋಸ್ಟ್ನ ತಪಾಸಣೆಗೆ ಒಳಗಾಗದೆ ಅವನ ಜೊತೆ ಮರವಂತೆ ಸಮೀಪದ ನಡುಬೆಟ್ಟು ಎಂಬಲ್ಲಿರುವ ಮನೆಗೆ ಬಂದಿದ್ದಾನೆ.
ಹೊರರಾಜ್ಯದಿಂದ ಬಂದರೆ ನೇರವಾಗಿ ಮನೆಗೆ ಸೇರಲು ಅವಕಾಶ ಇಲ್ಲ ಎಂಬ ಮಾಹಿತಿ ತಿಳಿದ ಮನೆಯವರು ಮತ್ತು ಅಕ್ಕಪಕ್ಕದವರು ಅವನನ್ನು ಮನೆಗೆ ಸೇರಿಸಿಕೊಳ್ಳಲು ಹಿಂದೇಟುಹಾಕಿದ್ದಾರೆ. ಅಲ್ಲದೆ, ಕಣ್ತಪ್ಪಿಸಿ ಬಂದಿರುವ ವಿಚಾರಗಳನ್ನು ಗ್ರಾ.ಪಂ. ಗಮನಕ್ಕೆ ತಂದಿದ್ದಾರೆ. ಪಂಚಾಯತ್ ಅಧಿಕಾರಿಗಳು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯರಿಗೆ ಮಾಹಿತಿ ಮುಟ್ಟಿಸಿದ್ದಾರೆ.
ವೈದ್ಯರು ಅವನನ್ನು ಕುಂದಾಪುರದಲ್ಲಿ ಪ್ರಾಥಮಿಕ ಪರೀಕ್ಷೆ ನಡೆಸಿ, ಸರಕಾರಿ ಕ್ವಾರಂಟೈನ್ ಕೇಂದ್ರಕ್ಕೆ ಕಳುಹಿಸಿದ್ದಾರೆ.