ಮಂಗಳೂರು, ಮೇ 21 (Daijiworld News/MSP): ಲಾಕ್ ಡೌನ್ ಬಳಿಕ ರಸ್ತೆಗಿಳಿದ ಕೆ.ಎಸ್.ಆರ್.ಟಿ.ಸಿ ಬಸ್ ಗಳು ಪ್ರಯಾಣಿಕರಿಂದ ಹೆಚ್ಚಿನ ಹಣ ವಸೂಲಿ ಮಾಡುತ್ತಿವೆ ಎಂಬ ಆರೋಪಗಳು ಕೇಳಿಬಂದಿದ್ದು ಆದರೆ ಇದನ್ನು ಕೆ.ಎಸ್.ಆರ್.ಟಿ.ಸಿ ಅಧಿಕಾರಿಗಳು ನಿರಾಕರಿಸಿದ್ದಾರೆ.
ಬಿ.ಸಿರೋಡ್ - ಕಲ್ಲಡ್ಕದ ಹಿಂದಿನ ಹಾಗೂ ಈಗಿನ ದರವನ್ನು ತುಲನೆ ಮಾಡಿ ಟಿಕೆಟ್ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಕೆಲವು ಪ್ರಯಾಣಿಕರು ಟಿಕೆಟ್ಗಳಲ್ಲಿ ಎಕ್ಸ್ಪ್ರೆಸ್ ಶುಲ್ಕ ಎಂದು ನಮೂದಿಸಿದ್ದರೂ ಬಸ್ಗಳು ಆಗಾಗ್ಗೆ ಷಟಲ್ ಬಸ್ ನಂತೆ ಅಲ್ಲಲ್ಲಿ ನಿಲುಗಡೆ ಮಾಡುತ್ತದೆ ಎಂದು ದೂರಿದ್ದಾರೆ. ಮಂಗಳೂರು ಮತ್ತು ಪುತ್ತೂರು ನಡುವಿನ ಶುಲ್ಕವನ್ನು 42 ರಿಂದ 61 ರೂಗಳಿಗೆ ಹೆಚ್ಚಿಸಲಾಗಿದೆ, ಮಂಗಳೂರು- ಕಲ್ಲಡ್ಕ ದರ 30 ಇದ್ದು ಅದೀಗ 42 ಆಗಿದೆ ಮತ್ತು ಕುಂದಾಪುರ -ಮಣಿಪಾಲ ನಡುವಿನ ಶುಲ್ಕವನ್ನು 110 ರೂಗಳಿಗೆ ಹೆಚ್ಚಿಸಲಾಗಿದೆ ಎಂದು ಹೇಳಲಾಗುತ್ತಿದೆ.
ಕೆಎಸ್ಆರ್ಟಿಸಿ ಮೂಲಗಳು ಪ್ರಕಾರ, ಸಾಮಾಜಿಕ ಅಂತರದ ಮಾನದಂಡಗಳ ಆಧಾರದ ಮೇಲೆ ಕಡಿಮೆ ಸಂಖ್ಯೆಯ ಪ್ರಯಾಣಿಕರಿಗೆ ಬಸ್ಗಳಲ್ಲಿ ಅವಕಾಶ ಇರುವುದರಿಂದ, ನಿಗಮವು ಪ್ರತಿ ಕಿಲೋಮೀಟರ್ಗೆ 14 ರೂ. ನಷ್ಟ ಅನುಭವಿಸುತ್ತಿದೆ. ಪ್ರತಿ ಕಿಲೋಮೀಟರಿಗೆ 36 ರೂ. ಬಸ್ನ ಚಾಲನಾ ವೆಚ್ಚವಾಗುತ್ತಿದೆ ಆದರೆ ಪ್ರತಿ ಕಿ.ಮೀ.ಗೆ 22 ರೂ. ಮಾತ್ರ ಗಳಿಕೆ ಆಗುತ್ತಿದೆ ಎಂದು ಪ್ರತಿಕ್ರಿಯಿಸಿದ್ದಾರೆ.