ಮಂಗಳೂರು, ಮೇ 21 (Daijiworld News/MSP): ಕರಾವಳಿಯಲ್ಲಿ ಕೊರೊನಾ ರಣಕೇಕೆ ಹಾಕಲು ಪ್ರಾರಂಭಿಸಿದ್ದು ಅವಿಭಜಿತ ಜಿಲ್ಲೆಯಲ್ಲಿ ಇಂದು 33 ಪ್ರಕರಣ ದೃಢವಾಗಿದ್ದು, ಇದು ಉಭಯ ಜಿಲ್ಲೆಯ ಜನರಲ್ಲಿ ಆತಂಕ ಹೆಚ್ಚುವಂತೆ ಮಾಡಿದೆ.
ಅರೋಗ್ಯ ಇಲಾಖೆ ಇಂದು ಮಧ್ಯಾಹ್ನ ಬಿಡುಗಡೆ ಮಾಡಿದ ಬುಲೆಟಿನ್ ಉಡುಪಿ ಜಿಲ್ಲೆಯಲ್ಲಿ 27 ಪ್ರಕರಣ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 6 ಪಾಸಿಟಿವ್ ಪ್ರಕರಣ ಪತ್ತೆಯಾಗಿದೆ. ಈ ಪೈಕಿ ದುಬೈ ಹಾಗೂ ಮುಂಬೈಯಿಂದ ಬಂದ ಪ್ರಯಾಣಿಕರಲ್ಲೇ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಪಾಸಿಟಿವ್ ಪ್ರಕರಣ ಪತ್ತೆಯಾಗಿದೆ.
ಉಡುಪಿ ಜಿಲ್ಲೆ:
ಸ್ವೀಕೃತವಾದ 199 ಜನ ವರದಿಯಲ್ಲಿ 27 ಜನರಲ್ಲಿ ಪಾಸಿಟಿವ್ ಬಂದಿದ್ದು, ಈ ಪೈಕಿ ಮಹಾರಾಷ್ಟ್ರದಿಂದ ಬಂದ 23 ಜನರಲ್ಲಿ, ತೆಲಂಗಾಣದಿಂದ ಬಂದ ಮೂವರಲ್ಲಿ ಹಾಗೂ ಕೇರಳದಿಂದ ಕೆಎಂಸಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ಬಂದ ಒಬ್ಬರಲ್ಲಿ ಪಾಸಿಟಿವ್ ಬಂದಿದೆ. ಇವರಲ್ಲಿ 6 ಮಂದಿ ಪುರುಷರಾಗಿದ್ದು, ಐವರು ಮಹಿಳೆಯರಾಗಿದ್ದಾರೆ, ಆತಂಕಕಾರಿ ವಿಚಾರ ಎಂದರೆ 16 ಮಕ್ಕಳಲ್ಲಿ ಕೊರೊನಾ ದೃಢವಾಗಿದೆ ಚಿಕಿತ್ಸೆಗಾಗಿ ಬಂದಿದ್ದ ಕೇರಳದವರನ್ನು ಹೊರತುಪಡಿಸಿ ಉಳಿದವರೆಲ್ಲರೂ ಕ್ವಾರಂಟೈನ್ ಕೇಂದ್ರದಲ್ಲಿದ್ದು ಅವರನ್ನು ಈಗಾಗಲೇ ಕೊವೀಡ್ ಆಸ್ಪತ್ರೆಗೆ ಶಿಫ್ಟ್ ಮಾಡಿ ಚಿಕಿತ್ಸೆ ಪ್ರಾರಂಭಿಸಲಾಗಿದೆ ಎಂದು ಜಿಲ್ಲಾಧಿಕಾರಿ ಮಾಹಿತಿ ನೀಡಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆ: ದುಬೈನಿಂದ ಮೇ 18 ರಂದು ಬಂದ ಎರಡನೇ ವಿಮಾನದ 178 ಮಂದಿಯಲ್ಲಿ 110 ಮಂದಿಯನ್ನು ಜಿಲ್ಲಾಡಳಿತ ಕ್ವಾರಂಟೈನ್ ನಲ್ಲಿ ಇರಿಸಲಾಗಿದ್ದು ಇವರ ಪೈಕಿ 6 ಮಂದಿಯಲ್ಲಿ ಕೊರೊನಾ ದೃಢವಾಗಿದೆ. ಪಾಸಿಟಿವ್ ಬಂದ 6ಮಂದಿ ಪುರುಷರಾಗಿದ್ದು, ಐವರು ದ.ಕ ಜಿಲ್ಲೆಯವರಾಗಿದ್ದು ಓರ್ವ ಮಾತ್ರ ಕಲಬುರ್ಗಿ ಜಿಲ್ಲೆಯ ನಿವಾಸಿಯಾಗಿದ್ದಾರೆ.