ಕಾಸರಗೋಡು, ಮೇ 21 (DaijiworldNews/SM): ದೇಶದಲ್ಲಿ ಕೊರೊನಾ ಲಾಕ್ ಡೌನ್ ನಡುವೆ ಖದಿಮರು ದೈವಸ್ಥಾನಗಳಿಗೆ ಕನ್ನ ಹಾಕಿರುವ ಘಟನೆ ಜಿಲ್ಲೆಯ ಮಂಜೇಶ್ವರ ತಾಲೂಕಿನ ಮೀಯಪದವು ಬೆಜ್ಜ ಪರಿಸರದಲ್ಲಿ ನಡೆದಿದೆ.
ಹೊಸಕಟ್ಟೆ ಬೆಜ್ಜದ ರಕ್ತೇಶ್ವರಿ ದೈವಸ್ಥಾನದ ಗರ್ಭ ಗುಡಿಯ ಬೀಗ ಮುರಿದು ಒಳ ನುಗ್ಗಿದ ಖದೀಮರು ಕಳವು ನಡೆಸಿದ್ದಾರೆ ಎಂದು ತಿಳಿದುಬಂದಿದೆ. ದೈವಸ್ಥಾನದೊಳಗಿದ್ದ ಬೆಳ್ಳಿಯ ಆಯುಧ, ಬೆಳ್ಳಿಯ ಮಾಲೆ, ಮೊಗ ಸಹಿತ ಭಂಡಾರ ಸಾಮಾಗ್ರಿಗಳನ್ನು ಕಳ್ಳರು ಕದ್ದೊಯ್ದಿದ್ದಾರೆ. ದೈವಸ್ಥಾನದ ಬೀಗ ಮುರಿದು ಒಳ ನುಗ್ಗಿದ ಕಳ್ಳರು ಗರ್ಭ ಗುಡಿಯ ಬಳಿ ಇದ್ದ ಇನ್ನೊಂದು ಬಾಗಿಲನ್ನು ಮುರಿದು ಒಳ ಪ್ರವೇಶಿಸಿದ್ದಾರೆ. ಇನ್ನು ಹೊರ ಅವರಣದಲ್ಲಿದ್ದ ಕಾಣಿಕೆ ಡಬ್ಬಿಯನ್ನು ಮುರಿದು ನಗದು ದೋಚಲಾಗಿದೆ.
ಗುರುವಾರ ಬೆಳಿಗ್ಗೆ ದೈವಸ್ಥಾನಕ್ಕೆ ಕೈ ಮುಗಿಯಲು ಬಂದ ಮೀಯಪದವು ಶಿವಾಜಿ ನಗರದ ಅಂಬರೀಷ್ ಎಂಬವರ ಗಮನಕ್ಕೆ ಬಂದಿದ್ದು, ದೈವಸ್ಥಾನ ಆಡಳಿತ ಸಮಿತಿಯ ಗಮನಕ್ಕೆ ತರಲಾಯಿತು. ಒಟ್ಟು ಸುಮಾರು ಒಂದೂವರೆ ಲಕ್ಷ ರೂಪಾಯಿಗಳ ಸಾಮಾಗ್ರಿ ಹಾಗೂ ನಗದು ಕಳವುಗೈದಿದ್ದಾರೆ ಎಂದು ದೈವಸ್ಥಾನದ ಸೇವಾ ಸಮಿತಿ ಅಧ್ಯಕ್ಷ ರಂಜಿತ್ ಎಂಬವರು ಮಂಜೇಶ್ವರ ಪೋಲಿಸರಿಗೆ ದೂರು ನೀಡಿದ್ದಾರೆ.
ಇದೇ ಪರಿಸರದ ಬೆಜ್ಜ ಶ್ರೀ ಧೂಮಾವತೀ ಬಂಟ ದೈವದ ಕಾಣಿಕೆ ಡಬ್ಬಿಯನ್ನು ಕಳ್ಳರು ಮುರಿದು ನಗದು ದೋಚಿದ್ದಾರೆ ಎಂದು ತಿಳಿದುಬಂದಿದೆ.