ಮೂಡುಬಿದಿರೆ, ಮೇ 21 (DaijiworldNews/SM): ವಿಧಿಯಾಟ ಯಾರನ್ನು ಯಾವ ರೀತಿಯಲ್ಲಿ ಬೇಕಾದರೂ ಕಾಡುತ್ತದೆ ಅನ್ನುವುದಕ್ಕೆ ದೃಷ್ಟಾಂತ ಎಂಬಂತೆ ಕರಾವಳಿಯಲ್ಲಿ ಮನಕಲಕುವ ಘಟನೆಯೊಂದು ನಡೆದಿದೆ. ಇತ್ತ ತಾಯಿ ಮಗುವಿಗೆ ಜನ್ಮ ನೀಡುತ್ತಿದ್ದಂತೆ ಅತ್ತ ತಂದೆ ಇಹಲೋಕದ ಪಯಣ ಮುಗಿಸಿರುವ ಹೃದಯ ವಿದ್ರಾವಕ ಸನ್ನಿವೇಶ ಎದುರಾಗಿದೆ.
ಮೂಡುಬಿದಿರೆ ಮೂಲದ ವ್ಯಕ್ತಿಯೊಬ್ಬರು ಮುಂಬೈನಲ್ಲಿ ಕೆಲಸದಲ್ಲಿದ್ದರು. ಅವರಿಗೆ ಕೊರೊನಾ ಸೋಂಕು ಕಂಡುಬಂದಿದ್ದು, ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ. ವಿಪರ್ಯಾಸವೆಂದರೆ ಅದೇ ದಿನ ಆ ವ್ಯಕ್ತಿಯ ಪತ್ನಿ ಮಗುವಿಗೆ ಜನ್ಮ ನೀಡಿದ್ದು, ಮಗು ಕಣ್ತೆರೆಯುವ ಮುನ್ನವೇ ವಿಧಿಯಾಟ ಮಗುವಿನ ತಂದೆಯನ್ನು ಬಲಿ ಪಡೆದುಕೊಂಡಿದೆ.
ಮೃತರ ಪತ್ನಿ ತಮ್ಮ ನಿವಾಸ ಮೂಡುಬಿದಿರೆಯಲ್ಲಿ ವಾಸವಾಗಿದ್ದಾರೆ. ತುಂಬು ಗರ್ಭಿಣಿಯಾಗಿದ್ದ ಅವರು ಇದೀಗ ಮಗುವಿಗೆ ಜನ್ಮ ನೀಡಿದ್ದಾರೆ. ಮತ್ತೊಂದೆಡೆ ಅವರ ಪತಿ ಕೊರೊನಾದಿಂದ ಮೃತಪಟ್ಟಿರುವ ಹಿನ್ನೆಲೆಯಲ್ಲಿ ಅಂತಿಮವಾಗಿ ಅವರ ಮುಖ ನೋಡುವ ಅವಕಾಶವೂ ಕೂಡ ಅವರಿಗೆ ಇಲ್ಲದಂತಾಗಿದ್ದು, ಮನ ಮಿಡಿಯುವ ಪ್ರಸಂಗ ನಡೆದಿದೆ.