ಮೂಡುಬಿದಿರೆ, ಮೇ 21 (DaijiworldNews/SM): ಇಲ್ಲಿನ ನಿವಾಸಿಯೊಬ್ಬರು ಮುಂಬೈನಲ್ಲಿ ಮೃತಪಟ್ಟಿದ್ದು, ಅವರ ಪತ್ನಿ ಅದೇ ದಿನ ಮಗುವಿಗೆ ಜನ ನೀಡಿದ ಹೃದಯ ವಿದ್ರಾವಕ ಘಟನೆ ನಡೆದಿದ್ದು, ಶೋಕತಪ್ತ ಕುಟುಂಬಕ್ಕೆ ಶಾಸಕ ಉಮಾನಾಥ್ ಕೊಟ್ಯಾನ್ ಸಾಂತ್ವಾನ ಹೇಳಿದ್ದಾರೆ.
ದೈಜಿವರ್ಲ್ಡ್ ಗೆ ಪ್ರತಿಕ್ರಿಯೆ ನೀಡಿರುವ ಅವರು, ಕರಾವಳಿಯಲ್ಲಿ ಮನಕಲುಕುವ ಘಟನೆ ನಡೆದಿದೆ. ಪತ್ನಿ ಮಗುವಿಗೆ ಜನ್ಮ ನೀಡಿದ ದಿನವೇ ಪತಿ ಇಹಲೋಕ ತ್ಯಜಿಸಿದ್ದಾರೆ. ಮೃತರ ಪತ್ನಿಗೆ ಗಂಡನೇ ಸರ್ವಸ್ವವಾಗಿದ್ದರು. ಆಕೆಗೆ ಪೋಷಕರು ಯಾರೂ ಇಲ್ಲದ ಕಾರಣ ಪತಿ-ಪತ್ನಿ ಮುಂಬೈನಲ್ಲಿ ಜತೆಯಲ್ಲಿದ್ದರು. ಆದರೆ, ಗರ್ಭಿಣಿಯಾಗಿದ್ದ ಪತ್ನಿಯನ್ನು ಕೆಲವು ತಿಂಗಳ ಹಿಂದೆಯಷ್ಟೇ ಪತಿ ಊರಿಗೆ ಕಳುಹಿಸಿದ್ದರು ಎಂದು ಶಾಸಕರು ಮಾಹಿತಿ ನೀಡಿದ್ದಾರೆ.
ಇನ್ನು ಈ ನಡುವೆ ಮುಂಬೈನಲ್ಲಿ ಆ ವ್ಯಕ್ತಿಗೆ ಹೃದಯ ನೋವು ಕಂಡುಬಂದಿದೆ. ಹಲವು ಆಸ್ಪತ್ರೆಗಳಿಗೆ ಅಲೆದಾಡಿದರೂ ಸೂಕ್ತ ಚಿಕಿತ್ಸೆ ಸಿಕ್ಕಿಲ್ಲ. ಅಂತಿಮವಾಗಿ ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅಲ್ಲಿ ಅವರು ಮೃತಪಟ್ಟಿದ್ದಾರೆ. ಆ ಮಹಾ ತಾಯಿ ಗಂಡನನ್ನು ಮಗನ ರೂಪದಲ್ಲಿ ಜನ್ಮ ನೀಡಿದ್ದಾರೆ ಎಂದು ಶಾಸಕ ಉಮಾನಾಥ್ ಕೊಟ್ಯಾನ್ ಪ್ರತಿಕ್ರಿಯೆ ನೀಡಿದ್ದಾರೆ. ಅಂತಿಮವಾಗಿ ಪತ್ನಿಗೆ ಗಂಡನ ಮುಖ ನೋಡುವ ಅವಕಾಶ ಸಿಕ್ಕಿಲ್ಲವಾದರೆ, ಅತ್ತ ತಂದೆಯ ಮುಖನೋಡುವ ಭಾಗ್ಯವೂ ಕೂಡ ಮಗುವಿಗೆ ಲಭ್ಯವಾಗಿಲ್ಲ.
ಇನ್ನು ಮೃತರ ಅಂತ್ಯಕ್ರಿಯೆ ಮುಂಬೈನಲ್ಲೇ ನಡೆಯಲಿದೆ. ಈ ಕುಟುಂಬಕ್ಕೆ ಸಾಂತ್ವಾನ ಹೇಳಲು ನಾನು ತೆರಳುತ್ತೇನೆ. ಅಲ್ಲದೆ, ಗಂಡನ ಅಣ್ಣ ಮುಂಬೈನಿಂದ ಊರಿಗೆ ಬರುತ್ತಿದ್ದು, ಕುಟುಂಬಕ್ಕೆ ಧೈರ್ಯ ತುಂಬಲಿದ್ದಾರೆ ಎಂದು ಶಾಸಕರು ಪ್ರತಿಕ್ರಿಯೆ ನೀಡಿದ್ದಾರೆ.