ಮಂಗಳೂರು. (Daijiworld News/MSP): ದೇಶವನ್ನೇ ಬೆಚ್ಚಿಬೀಳಿಸಿದ್ದ, ಹಾಗೂ ಜಾಗತಿಕ ಮಟ್ಟದಲ್ಲಿ ಸುದ್ದಿಗೆ ಕಾರಣವಾಗಿದ್ದ ಮಂಗಳೂರು ವಿಮಾನ ದುರಂತಕ್ಕೆ ಇಂದಿಗೆ ಹತ್ತು ವರ್ಷ. ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 2010ರ ಮೇ 22ರ ಮುಂಜಾನೆ ಏರ್ ಇಂಡಿಯಾ ವಿಮಾನ ರನ್ವೇಯಿಂದ ಜಾರಿ ಕೆಳಕ್ಕೆ ಬಿದ್ದು ಸಂಭವಿಸಿದ ಮಹಾ ದುರಂತ ಹತ್ತು ವರ್ಷಗಳೇ ಕಳೆದರೂ ಕಹಿ ಘಟನೆ ಮಾತ್ರ ಎಲ್ಲರ ಮನದಲ್ಲಿ ಜೀವಂತವಾಗಿದೆ.
ದುರಂತದಲ್ಲಿ ಪೈಲಟ್, ಸಿಬಂದಿ ಸೇರಿ 158 ಮಂದಿ ಮೃತಪಟ್ಟಿದ್ದರು. ಆ ವಿಮಾನದಲ್ಲಿ ಒಟ್ಟು 135 ಮಂದಿ ವಯ ಸ್ಕರು, 19 ಮಕ್ಕಳು ಹಾಗೂ 4 ಶಿಶುಗಳು, 6 ಮಂದಿ ವಿಮಾನ ಸಿಬಂದಿ ಸೇರಿ ಒಟ್ಟು 166 ಮಂದಿ ಪ್ರಯಾಣಿಸುತ್ತಿದ್ದರು. 8 ಮಂದಿ ಬದುಕುಳಿದಿದ್ದರು. ಮೃತಪಟ್ಟವರಲ್ಲಿ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಕೇರಳದವರಿದ್ದರು.
ಏರ್ ಇಂಡಿಯಾ ವಿಮಾನ ದುರಂತದಲ್ಲಿ ಮಡಿದಿದ್ದ ವ್ಯಕ್ತಿಯೊಬ್ಬರ ಕುಟುಂಬಕ್ಕೆ ಹೆಚ್ಚುವರಿ ಪರಿಹಾರ ಒದಗಿಸುವಂತೆ ಆದೇಶಿಸಿ ಸುಪ್ರೀಂ ಕೋರ್ಟ್ ಇದೀಗ ಮಹತ್ವದ ತೀರ್ಪು ನೀಡಿದೆ. ದುರಂತದಲ್ಲಿ ಮೃತಪಟ್ಟಿದ್ದ ಯುಎಇ ಮೂಲದ ಕಂಪೆನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ 45 ವರ್ಷದ ಮಹೇಂದ್ರ ಕೋಡ್ಕಣಿ ಅವರ ಕುಟುಂಬಕ್ಕೆ 7.64 ಕೋಟಿ ರೂ. ಪರಿಹಾರ ನೀಡುವಂತೆ ಏರ್ ಇಂಡಿಯಾ ಸಂಸ್ಥೆಗೆ ನ್ಯಾ| ಡಿ.ವೈ. ಚಂದ್ರಚೂಡ್ ಮತ್ತು ನ್ಯಾ| ಅಜಯ್ ರಸ್ತೋಗಿ ಅವರನ್ನೊಳಗೊಂಡ ಸು.ಕೋ. ನ್ಯಾಯಪೀಠ ಸೂಚಿಸಿದೆ. ಪ್ರಕರಣ ಸಂಬಂಧ ತೀರ್ಪು ನೀಡಿದ ನ್ಯಾಯಪೀಠವು ಮಹೇಂದ್ರ ಅವರಿಗೆ ಸಲ್ಲಬೇಕಾದ ಪರಿಹಾರದ ಲೆಕ್ಕಾಚಾರದ ವೇಳೆ ಅವರ ವೇತನದ ಮೊತ್ತದಿಂದ ಹಣ ಕಡಿತಗೊಳಿಸಿರುವುದು ಮತ್ತು ಅದಕ್ಕೆ ರಾಷ್ಟ್ರೀಯ ಗ್ರಾಹಕ ವ್ಯಾಜ್ಯ ಪರಿಹಾರ ಆಯೋಗವು ಕೊಟ್ಟಿರುವ ಕಾರಣವು ಒಪ್ಪವಂತದಲ್ಲ ಎಂದು ಹೇಳಿದೆ. ಈಗ ಅವರಿಗೆ 7.64 ಕೋಟಿ ರೂ. ಪರಿಹಾರ ಮೊತ್ತ ಮತ್ತು ಹೆಚ್ಚುವರಿ ಮೊತ್ತಕ್ಕೆ ವಾರ್ಷಿಕ ಶೇ.9 ಬಡ್ಡಿ ಸಮೇತ ಪಾವತಿಸಬೇಕು ಎಂದು ಸು.ಕೋರ್ಟ್ ಏರ್ ಇಂಡಿಯಾಗೆ ನಿರ್ದೇಶನ ನೀಡಿದೆ.