ಉಡುಪಿ, ಮೇ 22(Daijiworld News/MSP): ತಮ್ಮ ಮೇಲೆ ಮಾನಸಿಕ ಹಾಗೂ ದೈಹಿಕ ದೌರ್ಜನ್ಯಗಳಾಗುತ್ತಿವೆ ಎಂದು ಹಿರಿಯ ನಾಗರಿಕರಿಂದ ಸತತವಾಗಿ ದೂರುಗಳು ಬರುತಿದ್ದರೂ ಉಡುಪಿ ಜಿಲ್ಲಾಡಳಿತವು ಹಿರಿಯರ ರಕ್ಷಣೆಗೆ ಕಟಿಬದ್ಧವಾಗಿದೆ. ಸರಕಾರದ ವತಿಯಿಂದ ಪೊಲೀಸ್ ಸುಪರಿಟೆಂಡೆAಟ್ರವರ ಕಚೇರಿ ಉಡುಪಿಯಲ್ಲಿ ನಡೆಸಲಾಗುತ್ತಿರುವ ಸಹಾಯವಾಣಿ ಕೇಂದ್ರದಲ್ಲಿ ಕಳೆದ ಮಾರ್ಚ್ ತಿಂಗಳವರೆಗೆ ದಾಖಲಾದ 133 ಪ್ರಕರಣಗಳಲ್ಲಿ 109 ಪ್ರಕರಣಗಳನ್ನು ಕೇಂದ್ರದ ಆಪ್ತ ಸಲಹೆಗಾರರ ಮೂಲಕ ಹಾಗೂ ನ್ಯಾಯ ಮಂಡಳಿಯಿಂದ ತನಿಖೆ ನಡೆಸಿ ಇತ್ಯರ್ಥ ಪಡಿಸಲಾಗಿದೆ ಎಂದು ಉಡುಪಿ ಜಿಲ್ಲಾ ಹಿರಿಯ ನಾಗರಿಕರ ಕಲ್ಯಾಣಾಧಿಕಾರಿ ಚಂದ್ರ ನಾಯ್ಕ್ ತಿಳಿಸಿದ್ದಾರೆ.
ಜಿಲ್ಲಾಡಳಿತದಿಂದ ಸಮಸ್ಯೆ ಪರಿಹಾರ: ಅಧಿಕವಾಗಿ ಕುಟುಂಬದ ಆಸ್ತಿಗಳ ಪಾಲು ಪಡೆಯಲು ಕುಟುಂಬದ ಸದಸ್ಯರು ನಡೆಸುವ ಸಣ್ಣ ಪುಟ್ಟ ಜಗಳಗಳು ತೀವ್ರ ಸ್ವರೂಪ ಪಡೆದು ಅಸಹಾಯಕ ಹಿರಿಯ ನಾಗರಿಕರ ಮೇಲೆ ದೈಹಿಕ ಹಲ್ಲೆ ನಡೆಯುವ ತನಕ ಮುಂದುವರೆಯುತ್ತವೆ. ಮೊದಲಾಗಿ ದೌರ್ಜನ್ಯಕ್ಕೊಳಗಾಗುವ ಹಿರಿಯ ನಾಗರಿಕರನ್ನು ಹಾಗೂ ಮನೆಯ ಇತರ ಸದಸ್ಯರನ್ನು ಕರೆದು ಸೌಹಾರ್ದಯುತವಾಗಿ ಸಮಸ್ಯೆಗಳನ್ನು ಪರಿಹರಿಸಲು ಕೇಂದ್ರದ ಆಪ್ತ ಸಲಹೆಗಾರರಿಂದ ಪ್ರಯತ್ನಿಸಲಾಗುವುದು. ಅವಶ್ಯವಿದ್ದಲ್ಲಿ ಜಿಲ್ಲಾಡಳಿತದಿಂದ ನೇಮಕವಾದ ಸಂಧಾನಕಾರರ ಮೂಲಕ ಕಾನೂನು ಸಲಹೆಗಳನ್ನು ನೀಡಲಾಗುವುದು. ಆಗಲೂ ಸಮಸ್ಯೆ ಪರಿಹಾರವಾಗದಿದ್ದಲ್ಲಿ ಹಿರಿಯ ನಾಗರಿಕರ ಪೋಷಣೆ ಹಾಗೂ ಸಂರಕ್ಷಣಾ ಕಾಯಿದೆಯಡಿಯಲ್ಲಿ ರಚಿತವಾಗಿರುವ ನ್ಯಾಯಮಂಡಳಿಯಲ್ಲಿ ತನಿಖೆನಡೆಸಿ ನ್ಯಾಯ ನೀಡಲಾಗುವುದು.
ಯಾವ್ಯಾವ ಪ್ರಕರಣಗಳಲ್ಲಿ ದೂರು ನೀಡಬಹುದು : ಯಾರೇ ಆಗಲಿ ಹಿರಿಯ ನಾಗರೀಕರ ಸ್ಥಿರ, ಚರ ಆಸ್ತಿಗಳನ್ನು ಲಪಟಾಯಿಸಿದಲ್ಲಿ ಹಿರಿಯರಿಗೆ ಊಟ ಹಾಗೂ ಅವಶ್ಯಕ ಔಷಧಿಗಳನ್ನು ನೀಡದೇ ಸತಾಯಿಸುತಿದ್ದಲ್ಲಿ ಅಥವಾ ಅವರನ್ನು ಮನೆಯಿಂದ ಹೊರಹಾಕಲು ಪ್ರಯತ್ನಿಸಿದಲ್ಲಿ ಇವೆಲ್ಲವುಗಳನ್ನು ಹಿರಿಯ ನಾಗರೀಕರ ಮೇಲಿನ ದೌರ್ಜನ್ಯವೆಂದು ಪರಿಗಣಿಸಲಾಗುವುದು. ಒಂದು ವೇಳೆ ಹಿರಿಯ ನಾಗರಿಕರು ವೃದ್ದಾಶ್ರಮಗಳಲ್ಲಿ ಇರಲು ಬಯಸಿದಲ್ಲಿ ಅವರ ಮಕ್ಕಳೇ ಖರ್ಚನ್ನು ಭರಿಸಬೇಕಾಗುವುದು. ಇಂತಹ ಪ್ರಕರಣಗಳಲ್ಲಿ ಹಿರಿಯನಾಗರಿಕರು ನ್ಯಾಯಪಡೆಯಲು ಸಿವಿಲ್ ಅಥವಾ ಕ್ರಿಮಿನಲ್ ನ್ಯಾಯಾಲಯಗಳನ್ನು ಆಶ್ರಯಿಸಬೇಕೆಂದಿಲ್ಲ. ಪ್ರತಿಯೊಂದು ಜಿಲ್ಲೆಯಲ್ಲಿ ಸ್ಥಾಪಿತವಾಗಿರುವ ಹಿರಿಯ ನಾಗರೀಕರ ನ್ಯಾಯಮಂಡಳಿಗೆ ದೂರು ನೀಡಿದಲ್ಲಿ ಮೂರು ತಿಂಗಳೊಳಗೆ ತನಿಖೆ ನಡೆಸಿ ತೀರ್ಪು ನೀಡಬೇಕೆಂದು ಕಾಯಿದೆಯಲ್ಲಿ ವಿಧಿಸಲಾಗಿದೆ.
ಹಿರಿಯ ನಾಗರಿಕರ ನೆರವಿಗೆ ಸಂರಕ್ಷಣಾ ಕಾಯಿದೆ ರೂಪಿತವಾಗಿ 13 ವರ್ಷಗಳು ಕಳೆದರೂ ದೂರು ನೀಡುವ ಬಗ್ಗೆ ಹಿರಿಯ ನಾಗರಿಕರಿಗೆ ಸಾಕಷ್ಟು ಮಾಹಿತಿ ಸಿಗುತ್ತಿಲ್ಲವೆಂಬ ದೂರು ಇದೆ. ಇಂತಹ ದೂರುಗಳನ್ನು ನೀಡಬಯಸುವವರು ಸಹಾಯವಾಣಿಯ ಸಂಖ್ಯೆ 1090 ಅಥವಾ ಉಡುಪಿಯ ವೈಕುಂಠ ಬಾಳಿಗಾ ಕಾನೂನು ಮಹಾವಿದ್ಯಾಲಯದಲ್ಲಿರುವ ಮಾನವ ಹಕ್ಕುಗಳ ರಕ್ಷಣಾ ಪ್ರತಿಷ್ಠಾನದ ಕಛೇರಿಯನ್ನು ಸಂಪರ್ಕಿಸಿ ಮಾರ್ಗದರ್ಶನ ಪಡೆಯಬಹುದು.
ಇತ್ತೀಚೆಗೆ ಉಡುಪಿ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ನಡೆದ ಜಿಲ್ಲಾ ಉಸ್ತುವಾರಿ ಸಮಿತಿಯ ಸಭೆಯಲ್ಲಿ ಈ ಎಲ್ಲಾ ವಿಚಾರಗಳ ಬಗ್ಗೆ ಸುಧೀರ್ಘ ಚರ್ಚೆ ನಡೆದಿದೆ. ಈ ಕಾಯಿದೆಯ ಕುರಿತು ತಾಲೂಕು ಮಟ್ಟದಲ್ಲಿ ಹಾಗೂ ಪಂಚಾಯತ್ ಮಟ್ಟದಲ್ಲಿ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಯೋಜಿಸಬೇಕು ಎಂದು ಜಿಲ್ಲಾಧಿಕಾರಿಯವರು ಸೂಚಿಸಿದ್ದಾರೆ. ಶೀಘ್ರದಲ್ಲೇ ಪ್ರತಿಯೊಂದು ತಾಲೂಕಿನಲ್ಲಿರುವ ಹಿರಿಯ ನಾಗರಿಕರ ಸಂಸ್ಥೆಗಳ ಮೂಲಕ ಅರಿವು ಮೂಡಿಸುವ ಕಾರ್ಯಕ್ರಮಗಳು ನಡೆಯಲಿವೆ. ಈ ಸಭೆಗಳಲ್ಲಿ ಜಿಲ್ಲಾಡಳಿತದಿಂದ ನೇಮಕವಾಗಿರುವ ಸಂಧಾನಾಧಿಕಾರಿ ಡಾ| ರವೀಂದ್ರನಾಥ ಶಾನುಭಾಗರು ಕಾಯಿದೆಯ ಬಗ್ಗೆ ಮಾಹಿತಿ ನೀಡಲಿದ್ದಾರೆ.
ಅಂತೆಯೇ ಅನಧಿಕೃತ ವೃದ್ಧಾಶ್ರಮಗಳು ಹಿರಿಯ ನಾಗರಿಕರನ್ನು ವಂಚಿಸುವ ದೂರುಗಳು ಬಂದಿದ್ದು ಹಿರಿಯ ನಾಗರಿಕರು ಎಚ್ಚರಿಕೆಯಿಂದ ವ್ಯವಹರಿಸಬೇಕು. ಸದ್ಯದಲ್ಲೇ ಪೋಲೀಸ್ ವರಿಷ್ಠಾಧಿಕಾರಿಯವರ ನೇತೃತ್ವದಲ್ಲಿ ಜಿಲ್ಲೆಯಲ್ಲಿರುವ ಎಲ್ಲಾ ವೃದ್ದಾಶ್ರಮಗಳ ಮುಖ್ಯಸ್ಥರನ್ನೂ ಸೇರಿಸಿ ಸಭೆ ನಡೆಸಲಾಗುವುದು ಎಂದು ಚಂದ್ರನಾಯ್ಕ್ ತಿಳಿಸಿದ್ದಾರೆ.