ಉಳ್ಳಾಲ, ಮಾ 21: ಕಾಂಗ್ರೆಸ್ ನ ರಾಷ್ಟ್ರೀಯ ಅಧ್ಯಕ್ಷ ರಾಹುಲ್ ಗಾಂಧಿ ಮಾ 20 ರ ಮಂಗಳವಾರ ರಾತ್ರಿ ಉಳ್ಳಾಲ ದರ್ಗಾ ಭೇಟಿ ನೀಡಿ ಬಳಿಕ ಉಳ್ಳಾಲ ಅಬ್ಬಕ್ ವೃತ್ತದಲ್ಲಿರುವ ವೀರರಾಣಿ ಅಬ್ಬಕ್ಕ ಪ್ರತಿಮೆಗೆ ಹೂಹಾರ ಹಾಕುವ ಮೂಲಕ ಗೌರವಿಸಿದರು. ರಾಜ್ಯದ ಮುಖ್ಯಮಂತ್ರಿ ಸಿದ್ಧರಾಮಯ್ಯ , ಕ್ಷೇತ್ರದ ಶಾಸಕ ಹಾಗೂ ಸಚಿವ ಯು.ಟಿ.ಖಾದರ್ ಜತೆಗಿದ್ದರು.
ಜನಸ್ತೋಮ : ಮಂಗಳೂರಿನಿಂದ ಉಳ್ಳಾಲ ಬರುವ ಸಂದರ್ಭ ಕಲ್ಲಾಪು ಸಮೀಪ ರೋಡ್ ಷೋ ನಡೆಸುವುದಾಗಿ ಅಲ್ಲಿ ಸಾವಿರದಷ್ಟು ಸಂಖ್ಯೆಯಲ್ಲಿ ಕಾರ್ಯಕರ್ತರು ರಾಹುಲ್ ಗಾಂಧಿಯವರನ್ನು ಸ್ವಾಗತಿಸಲು ಮುಂದಾಗಿದ್ದರು. ಆದರೆ ಭದ್ರತೆ ದೃಷ್ಟಿಯಿಂದ ಕಮಾಂಡೋಗಳು ರಾಹುಲ್ ಗಾಂಧಿಯವರ ವಾಹನವನ್ನು ನಿಲ್ಲಿಸದಂತೆ ಸೂಚಿಸಿದ ಹಿನ್ನೆಲೆಯಲ್ಲಿ, ನೇರವಾಗಿ ಉಳ್ಳಾಲದ ಇತಿಹಾಸ ಪ್ರಸಿದ್ಧ ಸೈಯ್ಯಿದ್ ಮದನಿ ದರ್ಗಾ ತೆರಳಿ ವಿಶೇಷ ಪ್ರಾರ್ಥನೆ ಸಲ್ಲಿಸಿ ಛಾದರ ಸಮರ್ಪಿಸಿದರು. ಇದರಿಂದ ಕಾರ್ಯಕರ್ತರಲ್ಲಿ ನಿರಾಸೆ ಉಂಟಾಯಿತು.
ಕಾರ್ಯಕರ್ತರ ಮೇಲೆ ಲಾಠಿಚಾರ್ಜ್ :
ಅಖಿಲ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ರಾಹುಲ್ ಗಾಂಧಿ ಉಳ್ಳಾಲ ಭೇಟಿ ಸಂದರ್ಭದಲ್ಲಿ ಕಲ್ಲಾಪು, ಓವರ್ ಬ್ರಿಡ್ಜ್, ಉಳ್ಳಾಲ ದರ್ಗಾ ಬಳಿ ಸಾವಿರಾರು ಯುವ ಕಾಂಗ್ರೆಸ್ ಕಾರ್ಯಕರ್ತರು ಜಮಾಯಿಸಿದ್ದುದರಿಂದ ಜನಜಂಗುಳಿ ಉಂಟಾಗಿ, ಪೋಲೀಸ್ ಸಿಬ್ಬಂದಿ ಯುವಕರ ಮೇಲೆ ಹಲ್ಲೆ ನಡೆಸಿದ್ದರು.
ಅಪಘಾತ ತೆರವುಗೊಳಿಸಿದ ಸಚಿವರು
ರಾಹುಲ್ ಗಾಂಧಿ ಉಳ್ಳಾಲ ಭೇಟಿ ನೀಡುತ್ತಿದ್ದಂತೆ ಕಲ್ಲಾಪು ಸಮೀಪ ಡಸ್ಟರ್ ಕಾರು ಮತ್ತು ಲಾರಿ ನಡುವೆ ಸಣ್ಣ ಅಪಘಾತ ಸಂಭವಿಸಿದೆ. ಈ ವೇಳೆ ಸಚಿವ ಖಾದರ್ ವಾಹನದಿಂದ ಕೆಳಗೆ ಇಳಿದು ಜನ ಜಮಾಯಿಸಿರುವುದನ್ನು ಬದಿಗೆ ಸರಿಸುವಂತೆ ಮನವಿ ಮಾಡಿ ರಾ.ಹೆ.66 ರಲ್ಲಿ ವಾಹನಗಳ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು. ಅಲ್ಲದೆ ರಸ್ತೆ ಬದಿಯಲ್ಲೇ ನಿಂತಿದ್ದ ಸಚಿವ ಖಾದರ್ ಅವರು ಕಲ್ಲಾಪಿನಲ್ಲಿ ರಾಹುಲ್ ಗಾಂಧಿ ವಾಹನವನ್ನು ನಿಲ್ಲಿಸದೇ ಇದ್ದಾಗ ಅದರ ಹಿಂದೆಯೇ ಓಡಿ ಬಳಿಕ ಬೈಕಿನ ಮೂಲಕ ಉಳ್ಳಾಲ ತಲುಪಿದರು.