ಕಾಸರಗೋಡು, ಮೇ 22 (DaijiworldNews/PY) : ಈಗ ಕರ್ನಾಟಕದಲ್ಲಿರುವ ಕಾಸರಗೋಡು ಜಿಲ್ಲೆಯ ನಿವಾಸಿಗಳಾದ ಎಸ್.ಎಸ್.ಎಲ್.ಸಿ. ಪ್ಲಸ್-ಟು ವಿದ್ಯಾರ್ಥಿಗಳು ಜಿಲ್ಲೆಯಲ್ಲಿ ಪರೀಕ್ಷೆಗೆ ಹಾಜರಾಗುವ ನಿಟ್ಟಿನಲ್ಲಿ ಆಯಾ ವಿದ್ಯಾಲಯಗಳಿಗೆ ತಲುಪುವ ಉದ್ದೇಶದಿಂದ 2020 ಮೇ 25ರಂದು ಬೆಳಗ್ಗೆ 10 ಗಂಟೆಗೆ ಮಂಜೇಶ್ವರ ಚೆಕ್ ಪೋಸ್ಟ್ನಿಂದ ಪ್ರತ್ಯೇಕ ಕೆ.ಎಸ್.ಆರ್.ಟಿ.ಸಿ. ಬಸ್ ಸೌಲಭ್ಯ ಏರ್ಪಡಿಸಲಾಗುವುದು ಎಂದು ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ತಿಳಿಸಿದರು.
covid19jagratha.kerala.nic.in ಎಂಬ ವೆಬ್ ಪೋರ್ಟಲ್ನಲ್ಲಿ ಕಡ್ಡಾಯವಾಗಿ ನೋಂದಣಿ ನಡೆಸಬೇಕು. ಮೇ 25ರಂದು ಬೆಳಗ್ಗೆ 10 ಗಂಟೆಗೆ ತಲಪ್ಪಾಡಿ ಚೆಕ್ಪೋಸ್ಟ್ಗೆ ವಿದ್ಯಾರ್ಥಿಗಳು ಹಾಜರಾಗಬೇಕು. ವೆಬ್ ಪೋರ್ಟಲ್ನಲ್ಲಿ ನೋಂದಣಿ ನಡೆಸುವ ಸಂಬಂಧ ಸಂಶಯಗಳಿದ್ದಲ್ಲಿ ಎಸ್.ಎಸ್.ಎಲ್.ಸಿ. ವಿದ್ಯಾರ್ಥಿಗಳು ನೋಡೆಲ್ ಅಧಿಕಾರಿಗಳಾದ ಮಂಜೇಶ್ವರ ಎ.ಇ.ಒ.ದಿನೇಶನ್ (ದೂರವಾಣಿ ಸಂಖ್ಯೆ: 9496358767), ಹೈಯರ್ ಸೆಕೆಂಡರಿ ವಿದ್ಯಾರ್ಥಿಗಳು ನೋಡೆಲ್ ಅಧಿಕಾರಿಗಳಾದ ಬೇತೂರುಪಾರ ಸರಕಾರಿ ಹೈಯರ್ ಸೆಕೆಂಡರಿ ಶಾಲೆಯ ಪ್ರಾಂಶುಪಾಲ ಶಶಿಕುಮಾರ್ (ದೂರವಾಣಿ ಸಂಖ್ಯೆ: 9539412753) ಅವರನ್ನು ಸಂಪರ್ಕಿಸಬಹುದು.
ಕೊರೊನಾ ಜಾಗ್ರತಾ ವೆಬ್ ಪೋರ್ಟಲ್ನಲ್ಲಿ ನೋಂದಣಿ ನಡೆಸಿರುವ ವಿದ್ಯಾರ್ಥಿಗಳು ನಿಗದಿತ ಸಮಯದಲ್ಲಿ ಒಂದೊಮ್ಮೆ ಪಾಸ್ ಲಭಿಸದೇ ಇದ್ದರೂ, ನೋಂದಣಿ ನಡೆಸಿರುವ ದಾಖಲೆಗಳ ಸಹಿತ 25ರಂದು ಬೆಳಗ್ಗೆ 10 ಗಂಟೆಗೆ ಚೆಕ್ ಪೋಸ್ಟ್ಗೆ ಬರಬೇಕು. ಕೊರೊನಾ ಪ್ರತಿರೋಧ ಜಾಗೃತಾ ನಿಬಂಧನೆಗಳನ್ನು ಕಡ್ಡಾಯವಾಗಿ ಪಾಲಿಸಿ ಪರೀಕ್ಷೆಗಳನ್ನು ನಡೆಸುವುದನ್ನು ಖಚಿತಪಡಿಸುವ ನಿಟ್ಟಿನಲ್ಲಿ ಜಿಲ್ಲಾ ಶಿಕ್ಷಣ ಉಪನಿರ್ದೇಶಕಿ ಕೆ.ವಿ.ಪುಷ್ಪಾ ಅವರಿಗೆ ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಹೊಣೆ ನೀಡಿದ್ದಾರೆ.
ಜಿಲ್ಲಾಧಿಕಾರಿ ಕಚೇರಿಯಲ್ಲಿ ಈ ಸಂಬಂಧ ನಡೆದ ಸಭೆಯಲ್ಲಿ ಜಿಲ್ಲಾ ಶಿಕ್ಷಣ ಉಪನಿರ್ದೇಶಕಿ ಕೆ.ವಿ.ಪುಷ್ಪಾ, ಕಾಸರಗೋಡು ಜಿಲ್ಲಾ ಶಿಕ್ಷಣ ಅಧಿಕಾರಿ ನಂದಿಕೇಶ, ಕಾಞಂಗಾಡು ಜಿಲ್ಲಾ ಶಿಕ್ಷಣಾಧಿಕಾರಿ ಸರಸ್ವತಿ, ಕೆ. ಎಸ್.ಆರ್.ಟಿ.ಸಿ. ಕಾಸರಗೋಡು ಡಿಪೋ ಪ್ರಬಂಧಕ ಕುಂಞಿರಾಮನ್ ಮೊದಲಾದವರು ಮಾತನಾಡಿದರು