ಮಾ.21: ರಾಜ್ಯದ ಸರ್ಕಾರಕ್ಕೆ ತೀವ್ರ ಮುಜುಗರವನ್ನುಂಟು ಮಾಡಿದ್ದ, ಉದ್ಯಮಿ ಲೋಕಾನಾಥ್ ಪುತ್ರ ವಿದ್ವತ್ ಮೇಲಿನ ಹಲ್ಲೆ ಪ್ರಕರಣರದ ಎ1 ಆರೋಪಿ ಶಾಂತಿನಗರದ ಕಾಂಗ್ರೆಸ್ ಶಾಸಕ ಎನ್.ಎ ಹ್ಯಾರಿಸ್ ಪುತ್ರ ಮೊಹಮ್ಮದ್ ನಲಪಾಡ್ಗೆ ಜಾಮೀನು ನೀಡದಂತೆ ಸುಪ್ರೀಂಕೋರ್ಟ್ ಗೆ ರಾಜ್ಯ ಸರ್ಕಾರ ಕೇವಿಯಟ್ ಸಲ್ಲಿಸಿದೆ. ನಲಪಾಡ್ ಹಾಗೂ ಪ್ರಕರಣದ ಇತರ ಆರೋಪಿಗಳಿಗೆ ಜಾಮೀನು ನೀಡದಂತೆ ರಾಜ್ಯದ ವಕೀಲ ಸಂಜಯ್ ನೂಲಿ ಅವರು ಉಚ್ಚ ನ್ಯಾಯಲಯಕ್ಕೆ ಕೇವಿಯಟ್ ಸಲ್ಲಿಸಿದ್ದಾರೆ. ಇನ್ನು ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮೊಹಮ್ಮದ್ ಹಾಗೂ ಇತರ ಆರೋಪಿಗಳಿಗೆ ಈಗಾಗಲೇ ಹೈಕೋರ್ಟ್ ಜಾಮೀನು ನಿರಾಕರಿಸಿದೆ.
ಫೆಬ್ರವರಿ 17ರಂದು ಮೊಹಮ್ಮದ್ ನಲಪಾಡ್ ಮತ್ತು ಆತನ ಸ್ನೇಹಿತರು ಯು ಬಿ ಸಿಟಿಯಲ್ಲಿರುವ ಫರ್ಜಿ ಕೆಫೆಯಲ್ಲಿ ವಿದ್ವತ್ ಮೇಲೆ ಹಲ್ಲೆ ಮಾಡಿದ್ದರು. ಈ ಸಂಬಂಧ ಎಲ್ಲಾ ಆರೋಪಿಗಳ ವಿರುದ್ಧ ಕೊಲೆ ಯತ್ನದ ಪ್ರಕರಣ ದಾಖಲಾಗಿತ್ತು. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ನಾಟಕ ಹೈಕೋರ್ಟ್ ಆರೋಪಿಗಳಿಗೆ ಜಾಮೀನು ನಿರಾಕರಿಸಿತ್ತು. ಸದ್ಯ ಮೊಹಮ್ಮದ್ ನಲಪಾಡ್ ಪ್ರಕರಣ ಸಂಬಂಧ ನ್ಯಾಯಾಂಗ ಬಂಧನದಲ್ಲಿದ್ದು ಪರಪ್ಪನ ಅಗ್ರಹಾರದ ಜೈಲಿನಲ್ಲಿದ್ದಾರೆ.