ಉಡುಪಿ, ಮೇ 23 (Daijiworld News/MB) : ಮುಂಬೈನಿಂದ ಕ್ವಾರಂಟೈನ್ ವಿಚಾರದಲ್ಲಿ ಜಿಲ್ಲಾಧಿಕಾರಿಗಳು ಹಾಗೂ ಒಂದಷ್ಟು ಶಾಸಕರಿಗೆ ಕರೆ ಮಾಡಿ ಬೆದರಿಸುವಂತಹ ವ್ಯಕ್ತಿಗಳಿಗೆ ಉಡುಪಿ ಜಿಲ್ಲಾಧಿಕಾರಿ ಜಿ. ಜಗದೀಶ್ ಖಡಕ್ ಎಚ್ಚರಿಕೆ ನೀಡಿದ್ದಾರೆ.
ಶುಕ್ರವಾರ ಕುಂದಾಪುರ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಸಂಸದೆ ಶೋಭಾ ಕಂರದ್ಲಾಜೆ ಅಧ್ಯಕ್ಷತೆಯಲ್ಲಿ ಕರೆಯಲಾದ ಕೋವಿಡ್ ತಡೆಗಟ್ಟಲು ಕುಂದಾಪುರ ತಾಲೂಕಿನಲ್ಲಿ ಕೈಗೊಂಡಿರುವ ಮುಂಜಾಗೃತಾ ಕ್ರಮ ಹಾಗೂ ಕ್ವಾರಂಟೈನ್ ಕೇಂದ್ರಗಳ ಕುರಿತು ಸಭೆಯಲ್ಲಿ ಅವರು ಮಾತನಾಡಿದರು.
ಬಹಳಷ್ಟು ಮಂದಿ ಕ್ವಾರಂಟೇನ್ ವಿಚಾರವಾಗಿ ಮುಂಬೈಯಲ್ಲಿ ಕುಳಿತು ಡಾನ್ ರೀತಿ ಕರೆ ಮಾಡುತ್ತಿದ್ದು ಇದು ಜಿಲ್ಲಾಡಳಿತದ ಮುಂದೆ ನಡೆಯುವುದಿಲ್ಲ. ಅಂಥಹ ಕಿಡಿಗೇಡಿಗಳನ್ನು ಯಾವ ರೀತಿ ಮುಂಬೈನಿಂದ ಕರೆದು ಕೊಂಡು ಬರುವುದು ಎಂದು ನಮಗೆ ತಿಳಿದಿದೆ. ಕೆಲವರು ವಾರ್ಯ್ಸ್ ರೆಕಾರ್ಡ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡುತ್ತಿದ್ದಾರೆ. ಅದು ಇಂದಿಗೆ ಕೊನೆ, ನಾಳೆಯಿಂದ ಯಾರಾದರೂ ಕರೆ ಮಾಡಿ ಅದನ್ನು ವಾರ್ಯ್ಸ್ ರೆಕಾರ್ಡ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಿದ್ದಲ್ಲಿ ಅವರನ್ನು ಜೈಲಿಗಟ್ಟಲಾಗುವುದು ಎಂದು ವಾರ್ನಿಂಗ್ ನೀಡಿದ್ದಾರೆ.
ಮೂರು ತಿಂಗಳಿನಿಂದ ಹಗಲು ರಾತ್ರಿ ಊಟ ತಿಂಡಿ ಬಿಟ್ಟು ಕಾರ್ಯ ನಿರ್ವಹಿಸುತ್ತಿದ್ದೇವೆ. ಕರೆ ಮಾಡಿ ಬೆದರಿಸುವ ಕಿಡಿಗೇಡಿಗಳಿಗೆ ನಾವು ಇಷ್ಟೆಲ್ಲಾ ಅವರಿಗಾಗಿ ಮಾಡುತ್ತಿರುವುದು ಎಂಬುದು ನೆನಪಿನಲ್ಲಿ ಇರಬೇಕು. ಅದನ್ನು ಹೊರತುಪಡಿಸಿ ಡಿಸಿ, ಎಂಎಲ್ಎ, ಎಸಿ, ಎಸ್ಪಿ, ಎಸ್ಪಿ, ಎಂಪಿಗಳಿಗೆ ಬೈಯುವ ಆಟ ನಡೆಯುವುದಿಲ್ಲ. ಅದೆಷ್ಟೇ ಜನರು ಈ ರೀತಿ ಮಾಡಿದರೂ ಅವರನ್ನು ಜೈಲಿಗಟ್ಟುವ ಕಾರ್ಯ ಮಾಡಲಾಗುವುದು ಎಂದು ಹೇಳಿದ್ದಾರೆ.
ಇನ್ನು ಕ್ವಾರಂಟೈನ್ನಲ್ಲಿರುವವರಿಗೆ ಊಟದ ವ್ಯವಸ್ಥೆ ಕುರಿತಾಗಿ ಮಾತನಾಡಿದ ಅವರು, ಕೆಲವರು ಕ್ವಾರಂಟೈನ್ನಲ್ಲಿರುವವರಿಗೆ ಮನೆಯ ಊಟ ನೀಡಲು ಅನುಮತಿ ನೀಡದ ವಿಚಾರದಲ್ಲಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಆದರೆ ಕ್ವಾರಂಟೈನ್ನಲ್ಲಿ ಇರುವವರಿಗೆ ಮನೆಯ ಊಟ ನೀಡಲು ಅವಕಾಶ ನೀಡಲಾಗುವುದಿಲ್ಲ. ಬಟ್ಟೆ, ಊಟದ ಪಾತ್ರೆಯೊಂದಿಗೆ ಕೊರೊನಾ ವೈರಸ್ ಕೂಡಾ ಮನೆಗೆ ತಲುಪುತ್ತದೆ. ಆದ್ದರಿಂದ ಜಿಲ್ಲಾಡಳಿತಕ್ಕೆ ಎಲ್ಲರ ರಕ್ಷಣೆ ಅತೀ ಮುಖ್ಯ ಎಂದು ತಿಳಿಸಿದ್ದಾರೆ.
ಸಭೆಯಲ್ಲಿ ಬೈಂದೂರು ಶಾಸಕ ಸುಕುಮಾರ್ ಶೆಟ್ಟಿ, ಜಿಲ್ಲಾ ಪೊಲೀಸ್ ಅಧೀಕ್ಷಕ ವಿಷ್ಣುವರ್ಧನ್, ಕುಂದಾಪುರ ಉಪವಿಭಾಗಾಧಿಕಾರಿ ರಾಜು ಮೊದಲಾದವರು ಉಪಸ್ಥಿತರಿದ್ದರು.