ಕುಂದಾಪುರ, ಮೇ 23 (DaijiworldNews/PY) : ಕ್ವಾರಂಟೈನ್ ಕೇಂದ್ರಗಳಲ್ಲಿ ಕೊರೊನಾ ವ್ಯಾಪಿಸುವುದನ್ನು ನಿಯಂತ್ರಿಸುವ ಸಲುವಾಗಿ ಗ್ರಾಮೀಣ ಭಾಗಗಳಲ್ಲಿರುವ ಒಂಟಿ ಮನೆಗಳಲ್ಲಿ ಸರ್ಕಾರದ ನಿಯಾಮವಳಿಯ ಅನ್ವಯ ಅನೇಕ ಮಂದಿ ಕ್ವಾರಂಟೈನ್ಗೆ ಅವಕಾಶ ಕಲ್ಪಿಸುವಂತೆ ಕೇಳಿಕೊಂಡಿದ್ದು, ಈ ವಿಚಾರವಾಗಿ ಪರಿಶೀಲನೆ ನಡೆಸಿ, ಅಗತ್ಯವಾದ ಕ್ರಮಗಳನ್ನು ತೆಗೆದುಕೊಳ್ಳುವಂತೆ ಮುಖ್ಯಮಂತ್ರಿ ಹಾಗೂ ಮುಖ್ಯ ಕಾರ್ಯದರ್ಶಿ ಅವರಿಗೆ ಮನವಿ ಮಾಡಿರುವುದಾಗಿ ಸಂಸದೆ ಶೋಭಾ ಕರಂದ್ಲಾಜೆ ಹೇಳಿದರು.
ಕುಂದಾಪುರದಲ್ಲಿ ಶುಕ್ರವಾರ ತಾ.ಪಂ.ನ ಸಭಾಂಗಣದಲ್ಲಿ ಕೊರೊನಾ ನಿಯಂತ್ರಣಕ್ಕೆ ಸಂಬಂಧಿಸಿದಂತೆ ನಡೆದ ಸಮಾಲೋಚನಾ ಸಭೆಯಲ್ಲಿ ಮಾತನಾಡಿದ ಅವರು, ಈಗಾಗಲೇ 4,013 ಮಂದಿ ಕುಂದಾಪುರ ಹಾಗೂಬೈಂದೂರು ತಾಲೂಕಿನ ಕ್ವಾರಂಟೈನ್ ಕೇಂದ್ರದಲ್ಲಿದ್ದೂ, ಇನ್ನೂ ಜಾಸ್ತಿಯಾಗುವ ಸಾಧ್ಯತೆಯಿದೆ. ಆಯಾ ವಿಮಾನ ನಿಲ್ದಾಣಗಳ ಬಳಿಯೇ ಗಲ್ಫ್ ಹಾಗೂ ಐರೋಪ್ಯ ರಾಷ್ಟ್ರಗಳಿಂದ ಬರುವವರನ್ನು ಕ್ವಾರಂಟೈನ್ ಮಾಡಲು ವ್ಯವಸ್ಥೆ ಮಾಡಲಾಗಿದೆ. ವಯಸ್ಕರು, ಮಕ್ಕಳು ಹಾಗೂ ಇತರೆ ಕಾಯಿಲೆ ಹೊಂದಿದವರ ಬಗ್ಗೆ ಜಾಗೃತಿ ವಹಿಸುವುದು ಅಗತ್ಯ ಎಂದು ತಿಳಿಸಿದರು.
ಬಳಿಕ ಡಿ.ಸಿ ಜಿ. ಜಗದೀಶ್ ಮಾತನಾಡಿ, ಹೊರರಾಜ್ಯಗಳಿಂದ ಜಿಲ್ಲೆಗೆ 7,872 ಜನರು ಬಂದಿದ್ದಾರೆ. ಈ ಪೈಕಿ ಮಹಾರಾಷ್ಟ್ರದಿಂದ 6,800 ಮಂದಿ, ತೆಲಂಗಾಣದಿಂದ 450 ಮಂದಿ ಬಂದಿದ್ದಾರೆ. ಇನ್ನು ಹೊರರಾಜ್ಯಗಳಿಂದ ಬರುವ ಶೇ.10 ಮಂದಿಗೆ ಸೋಂಕು ಕಾಣಿಸಿಕೊಳ್ಳಬಹುದು ಎಂದು ಅಂದಾಜಿಸಲಾಗಿದ್ದು, ಈ ಸಲುವಾಗಿ ಕುಂದಾಪುರ, ಉದ್ಯಾವರ, ಉಡುಪಿ ಹಾಗೂ ಕಾರ್ಕಳದಲ್ಲಿ 400 ಹಾಸಿಗೆಗಳಿಗೆ ಅವಕಾಶವಿರುವ ಆಸ್ಪತ್ರೆಗಳನ್ನು ಗುರುತಿಸಲಾಗಿದೆ ಎಂದರು.
ಪ್ರತ್ಯೇಕ ವೈದ್ಯರು ಹಾಗೂ ಸಿಬ್ಬಂದಿಗಳನ್ನು ಕೊರೊನಾ ಆಸ್ಪತ್ರೆಗಳಿಗಾಗಿ ನಿಯೋಜನೆ ಮಾಡಲಾಗುತ್ತಿದ್ದು, ಇದರೊಂದಿಗೆ ಐಎಂಎ ಸಂಘಟನೆಯ ಸಹಾಯವನ್ನೂ ಪಡೆದುಕೊಳ್ಳಲಾಗುತ್ತದೆ. ಪ್ರತೀದಿನ ಸುಮಾರು 400 ಜನರ ಪರೀಕ್ಷಾ ವರದಿ ಪಡೆಯಲು ಪ್ರಯತ್ನ ಮಾಡಲಾಗುತ್ತಿದೆ. 12 ತಜ್ಞ ವೈದ್ಯರ ಸಮಿತಿಯನ್ನು ಗಂಭೀರ ಪ್ರಕರಣಗಳ ಚಿಕಿತ್ಸೆಗಾಗಿ ರಚನೆ ಮಾಡಲಾಗಿದ್ದು, ಸಲಹೆಯನ್ನೂ ತೆಗೆದುಕೊಳ್ಳಲಾಗುತ್ತಿದೆ. ಅಲ್ಲದೇ ಜಿಲ್ಲೆಯ ಬೇಡಿಕೆಯ ಅನ್ವಯ 2 ಕೋಟಿ ರೂ. ವೆಚ್ಚದಲ್ಲಿ ಜಿಲ್ಲಾಸ್ಪತ್ರೆಯಲ್ಲಿಯೇ ಲ್ಯಾಬ್ ಅನ್ನು ಪ್ರಾರಂಭ ಮಾಡುವ ಪ್ರಕ್ರಿಯೆ ನಡೆಯುತ್ತಿದೆ ಎಂದು ತಿಳಿಸಿದರು.