ಮಂಗಳೂರು, ಮೇ 23 (Daijiworld News/MB) : "ದೇಶದ ಜನರಿಗೆ ಪಿಎಂ ಕೇರ್ ನಿಧಿಯ ಬಗ್ಗೆ ವಿವರಣೆ ನೀಡಿ ಎಂದು ಕೇಳಿದ ಕಾರಣದಿಂದಾಗಿ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರ ಮೇಲೆ ಎಫ್ಐಆರ್ ದಾಖಲಿಸಲಾಗಿದ್ದು ಇದು ಖಂಡನಾರ್ಹ. ಇಂತಹ ಘಟನೆಗಳು ಪ್ರಜಾಪ್ರಭುತ್ವ ದೇಶದಲ್ಲೂ ಪ್ರಶ್ನಿಸುವ ಹಕ್ಕು ಕಸಿಯುವ ದ್ವೇಷದ ರಾಜಕೀಯಕ್ಕೆ ಸಾಕ್ಷಿ" ಎಂದು ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜಾ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಶುಕ್ರವಾರ ದ.ಕ. ಜಿಲ್ಲಾ ಕಾಂಗ್ರೆಸ್ನಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, "ಮಾತು ಆಡದಂತೆ ಮಾಡುವ ದಮನಕಾರಿ ನೀತಿಗೆ ಕಾಂಗ್ರೆಸ್ ಅವಕಾಶ ನೀಡಲಾರದು. ಈ ಬಗ್ಗೆ ನಿರಂತರ ಹೋರಾಟ ನಡೆಸಲು ನಾವು ಸಿದ್ಧ. ಈ ಕೂಡಲೇ ಕೇಸ್ ವಾಪಾಸ್ ಪಡೆಯಬೇಕು ಹಾಗೂ ದೂರು ದಾಖಲು ಮಾಡಿದ ಪೊಲೀಸ್ ಅಧಿಕಾರಿಯ ಬಗ್ಗೆ ತನಿಖೆಯಾಗಬೇಕು" ಎಂದು ಒತ್ತಾಯಿಸಿದರು.
"ಪಿಎಂ ಕೇರ್ ಹಣದ ಕುರಿತಾಗಿ ಪ್ರಶ್ನಿಸಿದ್ದಕ್ಕೆ ದೂರು ದಾಖಲು ಮಾಡಿದರೆ ಈ ಬಗ್ಗೆ ಪ್ರಶ್ನಿಸುವುದೇ ತಪ್ಪಾ? ಈ ಹಣವನ್ನು ಯಾರಿಗೆ ಎಷ್ಟು ಯಾತಾಕ್ಕಾಗಿ ಬಳಕೆ ಮಾಡಲಾಗಿದೆ ಎಂಬುದರ ಬಗ್ಗೆ ವಿವರಣೆ ನೀಡುವುದರಲ್ಲಿ ಯಾವ ತೊಂದರೆ ಕೇಂದ್ರಕ್ಕಿದೆ? ಈ ಕುರಿತಾಗಿ ಪ್ರಶ್ನಿಸಿದರವರನ್ನು ದೇಶದ್ರೋಹಿ ಎಂಬಂತೆ ಬಿಂಬಿಸುವುದು ಎಷ್ಟು ಸರಿ?" ಎಂದು ಪ್ರಶ್ನಿಸಿದರು.