ಉಡುಪಿ, ಮೇ 23 (DaijiworldNews/SM): ಉಡುಪಿ ಜಿಲ್ಲೆಯಲ್ಲಿ ಮೇ 23ರ ಶನಿವಾರ ಸಂಜೆ 7 ಗಂಟೆಯಿಂದ ಆರಂಭಗೊಂಡಿದ್ದು, ಸೋಮವಾರ ಬೆಳಗ್ಗೆ 7 ಗಂಟೆಯವರೆಗೆ 36 ಗಂಟೆಗಳ ಲಾಕ್ಡೌನ್ ಅನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುತ್ತದೆ ಎಂದು ಉಡುಪಿ ಜಿಲ್ಲಾಧಿಕಾರಿ ಜಿ. ಜಗದೀಶ್ ಆದೇಶ ನೀಡಿದ್ದಾರೆ.
ಅವರು ಶನಿವಾರ, ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಲಾಕ್ ಡೌನ್ ಉಲ್ಲಂಘಿಸಿ ಅನಗತ್ಯವಾಗಿ ತಿರುಗಾಡುವವರ ವಿರುದ್ದ ಪೊಲೀಸರು ಕಠಿಣ ಕ್ರಮ ಕೈಗೊಳ್ಳಲಿದ್ದಾರೆ ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ಎಚ್ಚರಿಸಿದ್ದಾರೆ.
ಈ 36 ಗಂಟೆಗಳ ಲಾಕ್ ಡೌನ್ ಅವಧಿಯಲ್ಲಿ ಅವಶ್ಯಕ ವಸ್ತುಗಳಾದ ಹಾಲು, ದಿನಪತ್ರಿಕೆ, ಔಷಧ ಅಂಗಡಿಗಳು ಮೀನು, ಮಾಂಸ ಮತ್ತು ಹೋಟೆಲ್ ಗಳಲ್ಲಿ ಪಾರ್ಸೆಲ್ ಗೆ ಮತ್ತು ವೈದ್ಯಕೀಯ ಸೇವೆಗಳಿಗೆ ಮಾತ್ರ ಅನುಮತಿ ನೀಡಿದ್ದು, ಇದರ ಹೊರತು ಇತರೇ ಯಾವುದೇ ಚಟುವಟಕೆಗಳಿಗೆ ಅನುಮತಿ ಇಲ್ಲ. ಈಗಾಗಲೇ ತಹಶೀಲ್ದಾರ್ ಅವರಿಂದ ಮದುವೆಗೆ ಅನುಮತಿ ಪಡೆದವವರು ಮದುವೆ ಮಾಡಬಹುದು ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದರು.