ಬೆಳ್ತಂಗಡಿ, ಮೇ 23 (DaijiworldNews/SM): ತಾಲೂಕಿನ ಆರಂಬೋಡಿಯಲ್ಲಿ ಮಹಿಳೆಯೊಬ್ಬರಿಗೆ ಕೊರೋನಾ ಪಾಸಿಟಿವ್ ಕಾಣಿಸಿಕೊಂಡ ಬಳಿಕ ಇದೀಗ ತಾಲೂಕಿನ ಶಿರ್ಲಾಲು ಗ್ರಾಮದಲ್ಲಿ ಮಹಿಳೆಯೊಬ್ಬರಲ್ಲಿ ಪಾಸಿಟಿವ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಮಜಲುಪಲ್ಕೆಯ 18 ಮನೆಗಳ ವ್ಯಾಪ್ತಿಯನ್ನು ಸೀಲ್ ಡೌನ್ ಮಾಡಲಾಗಿದೆ.
ಶಿರ್ಲಾಲು ಗ್ರಾಮದ ಮಜಲುಪಲ್ಕೆ ಎಂಬಲ್ಲಿನ 42 ವರ್ಷದ ಮಹಿಳೆಯಲ್ಲಿ ಶನಿವಾರದಂದು ಕೊರೊನಾ ಪಾಸಿಟಿವ್ ಧೃಢವಾಗಿದೆ. ಹೀಗಾಗಿ ಅಲ್ಲಿನ 18 ಮನೆಗಳ ವ್ಯಾಪ್ತಿಯನ್ನು ಸೀಲ್ ಡೌನ್ ಮಾಡಲಾಗಿದ್ದು, ಕಂಟೈನ್ ಮೆಂಟ್ ವಲಯ ಎಂದು ಘೋಷಿಸಲಾಗಿದೆ.
ಇನ್ನು ಇಲ್ಲಿನ ಸೋಂಕಿತ ಮಹಿಳೆಯನ್ನು ಚಿಕಿತ್ಸೆಗಾಗಿ ಕೋವಿಡ್ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಮಹಿಳೆಗೆ ಅಸ್ತಮಾ ಕಾಯಿಲೆ ಇತ್ತೆಂದು ಹೇಳಲಾಗಿದೆ. ಆಕೆಯ ಟ್ರಾವೆಲ್ ಹಿಸ್ಟರಿಯನ್ನು ಪಡೆದುಕೊಳ್ಳಲಾಗುತ್ತಿದೆ. ಈಕೆಯ ತವರು ಮನೆ ಉಜಿರೆ ಸನಿಹದ ಗುರಿಪಳ್ಳ ಎಂಬಲ್ಲಿದ್ದು ಅಲ್ಲಿಗೆ ಹೋಗಿದ್ದ ಸಂದರ್ಭ, ಮುಂಬಯಿಯವರು ಬಂದಿದ್ದು ಅವರಿಂದ ಈಕೆಗೆ ಸೋಂಕು ಹರಡಿರಬಹುದು ಎಂದು ಶಂಕಿಸಲಾಗಿದೆ.
ಸ್ಥಳಕ್ಕೆ ಶಾಸಕ ಹರೀಶ ಪೂಂಜ, ತಹಶೀಲ್ದಾರ್ ಗಣಪತಿ ಶಾಸ್ತ್ರೀ, ತಾಲೂಕು ವೈದ್ಯಾಧಿಕಾರಿಗಳು ಮತ್ತಿತರ ಅಧಿಕಾರಿಗಳು ಭೇಟಿ ನೀಡಿದ್ದಾರೆ. ಸೋಂಕಿತೆ ಭೇಟಿ ನೀಡುತ್ತಿದ್ದ ಸ್ಥಳಗಳಾದ ಹಾಲಿನ ಡೈರಿ, ಸೊಸೈಟಿ, ಬ್ಯಾಂಕ್ , ಅಂಗಡಿಗಳನ್ನು ವಾರ ಕಾಲ ಬಂದ್ ಮಾಡುವ ನಿರ್ಧಾರಕ್ಕೆ ಬರಲಾಗಿದೆ. ಶಿರ್ಲಾಲು ಸಹಿತ ಕರಂಬಾರು, ಕಾಜಿಮುಗೇರು ಪರಿಸರದವರು ಭಯಭೀತರಾಗಿದ್ದಾರೆ.