ಮಂಗಳೂರು, ಮೇ 24 (Daijiworld News/MB) : ಈದ್-ಉಲ್-ಫಿತರ್ ಹಬ್ಬದ ದಿನವಾಗಿದ್ದರೂ ಕೂಡಾ ಮಂಗಳೂರಿನ ಹಲವು ಪ್ರದೇಶಗಳಲ್ಲಿ ಲಾಕ್ಡೌನ್ ಕಟ್ಟುನಿಟ್ಟಿನಲ್ಲಿ ಜಾರಿಯಾಗಿದ್ದು ಹಲವು ಪ್ರದೇಶಗಳಲ್ಲಿ ಅಗತ್ಯ ವಸ್ತುಗಳ ಸಾಗಾಟದ ವಾಹನ ಮಾತ್ರ ಸಂಚಾರ ಮಾಡುತ್ತಿದೆ.
ಕರಾವಳಿ ಜಿಲ್ಲೆಗಳಲ್ಲಿ ಭಾನುವಾರ ಮುಸ್ಲಿಂ ಸಮುದಾಯವು ಈದ್-ಉಲ್-ಫಿತರ್ ಹಬ್ಬವನ್ನು ತಮ್ಮ ಮನೆಗಳಲ್ಲೇ ಆಚರಣೆ ಮಾಡುತ್ತಿದ್ದಾರೆ.
ಪ್ರತಿ ವರ್ಷವೂ ಹಬ್ಬದ ಅಂಗವಾಗಿ ನಮಾಝ್ ಸಲ್ಲಿಸಲೆಂದು ನಗರದ ಭಾವುಟಗುಡ್ಡದಲ್ಲಿನ ಈದ್ಗಾ ಮಸೀದಿಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ಮುಸ್ಲಿಂ ಬಾಂಧವರು ಸೇರುತ್ತಿದ್ದರು. ಆದರೆ ಕೊರೊನಾ ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಲಾಕ್ಡೌನ್ ಇರುವ ಕಾರಣದಿಂದಾಗಿ ಈ ವರ್ಷ ಮಸೀದಿ ಹಾಗೂ ಹಲವು ಪ್ರದೇಶಗಳು ನಿರ್ಜನವಾಗಿದೆ.
ರಾಜ್ಯ ಸರ್ಕಾರವೂ ಭಾನುವಾರ ಸಂಪೂರ್ಣ ಲಾಕ್ಡೌನ್ ಮಾಡಿ ಆದೇಶಿಸಿದ್ದು ವಿವಾಹ ಕಾರ್ಯಕ್ರಮ ನಡೆಸಲು ಅನುಮತಿ ನೀಡಿದೆ.
ಪ್ರಸ್ತುತ ನಾಲ್ಕನೇ ಹಂತದ ಲಾಕ್ಡೌನ್ ಜಾರಿಯಲ್ಲಿದ್ದು ಕೆಲವೊಂದು ಸಡಿಲಿಕೆಯನ್ನು ಮಾಡಲಾಗಿದೆ. ಭಾನುವಾರ ಮಾತ್ರ ಸಂಪೂರ್ಣ ಲಾಕ್ಡೌನ್ಗೆ ರಾಜ್ಯ ಸರ್ಕಾರ ಆದೇಶಿಸಿದೆ.