ಉಡುಪಿ, ಮಾ 22: ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ರಾಜ್ಯ ಮೀನುಗಾರಿಕೆ ಯುವಜನ ಮತ್ತು ಕ್ರೀಡಾ ಖಾತೆ ಸಚಿವರೂ ಆಗಿರುವ ಪ್ರಮೋದ್ ಮಧ್ವರಾಜ್ ಅವರು ರಾಜ್ಯ ರಾಜಕಾರಣದಲ್ಲಿ ಇತ್ತೀಚೆಗೆ ಹಲವು ಕಾರಣಗಳಿಂದ ಸುದ್ದಿಯಾಗಿದ್ದರು. ಒಂದೆಡೆ ಸಚಿವ ಮಧ್ವರಾಜ್ ಬಿಜೆಪಿಗೆ ಸೇರ್ಪಡೆಯಾಗುತ್ತಾರೆ ಎನ್ನುವ ಉಹಾಪೋಹಗಳು ಹಬ್ಬಿದ್ರೆ, ಇನ್ನೊಂದೆಡೆ 193 ಕೋಟಿ ರೂಪಾಯಿಯ ಬ್ಯಾಂಕ್ ಸಾಲ ಹಗರಣದ ಆರೋಪ ಅವರ ಮೇಲೆ ಕೇಳಿಬಂದಿತ್ತು. ಆದರೆ ಇದೀಗ, ದಾಯ್ಜಿವರ್ಲ್ಡ್ ಸಮೂಹ ಸಂಸ್ಥೆಗಳ ಸ್ಥಾಪಕಾಧ್ಯಕ್ಷ ವಾಲ್ಟರ್ ನಂದಳಿಕೆ ಅವರು ನಡೆಸಿಕೊಡುವ ’ಪಬ್ಲಿಕ್ ಚಾಲೆಂಜ್ ’ ಎನ್ನುವ ವಿಶೇಷ ಸಂದರ್ಶನದಲ್ಲಿ ಪ್ರಮೋದ್ ಮಧ್ವರಾಜ್ ಅವರು ಈ ಎಲ್ಲಾ ಉಹಾಪೋಹ ಮತ್ತು ಆರೋಪಗಳಿಗೆ ತೆರೆ ಎಳೆದಿದ್ದಾರೆ.
ತಾನು ಯಾವುದೇ ಕಾರಣಕ್ಕೂ ಬಿಜೆಪಿಗೆ ಸೇರ್ಪಡೆಯಾಗುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ನಾನು ಕಾಂಗ್ರೆಸ್ ಪಕ್ಷವನ್ನು ತೊರೆಯಲಿದ್ದೇನೆ ಅಥವಾ ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾಗುತ್ತಿದ್ದೇನೆ ಎಂದು ಯಾರಿಗೂ, ಎಲ್ಲಿಯೂ ಹೇಳಲಿಲ್ಲ, ನಾನು ಈ ಬಗ್ಗೆ ಎಂದಿಗೂ ಯೋಚಿಸಿರಲಿಲ್ಲ, ಅಂತಹ ಯಾವುದೇ ಯೋಜನೆ ಇಲ್ಲ" ಎಂದು ಅವರು ಹೇಳಿದ್ದಾರೆ. ಹಾಗಿದ್ರೆ ಈ ರೀತಿಯ ಉಹಾಪೋಹಗಳು ಹಬ್ಬಿದಾದರೂ ಹೇಗೆ ಎನ್ನುವ ಪ್ರಶ್ನೆಗೆ ಉತ್ತರಿದ ಅವರು, ನನಗೆ ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾಗುವಂತೆ ಹೊಸದೆಹಲಿಯ ಬಿಜೆಪಿ ನಾಯಕರಿಂದ ಒತ್ತಡವಿತ್ತು. ಆದರೆ ಜಿಲ್ಲಾ ಸ್ಥಳೀಯ ಬಿಜೆಪಿ ನಾಯಕರಿಗೆ ನಾನು ಬಿಜೆಪಿ ಸೇರ್ಪಡೆಯಾಗುವುದು ಇಷ್ಟ ಇಲ್ಲ. ಹೀಗಾಗಿ ಡಿಮ್ಯಾಂಡ್ ಇದ್ದ ಕಡೆ ಒತ್ತಡಗಳು ಬರೋದು ಸಹಜ ಆದರೆ ಪಕ್ಷ ಬಿಡುವ ಯೋಚನೆ ಇಲ್ಲ ಎಂದು ತಮ್ಮ ಮಾತನ್ನು ಪುನರುಚ್ಚರಿದರು.
ಇನ್ನು ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ಪಕ್ಷವೂ ಆದಾಯ ತೆರಿಗೆ ಇಲಾಖೆಯ ಐಟಿ ದಾಳಿಯ ಮೂಲಕ ಕಾಂಗ್ರೆಸ್ ನಾಯಕರಿಗೆ ಒತ್ತಡ ಹೇರುತ್ತಿದೆಯೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಒಬ್ಬ ಸಮರ್ಪಕ ತೆರಿಗೆ ಪಾವತಿದಾರ ಆದಾಯ ತೆರಿಗೆ ಇಲಾಖೆ ಬಗ್ಗೆ ಹೆದರಬೇಕಾಗಿಲ್ಲ. ಹೀಗಾಗಿ ನನಗೂ ಯಾರಿಂದಲೂ ಯಾವುದೇ ಚಿಂತೆಯಿಲ್ಲ. ಜಿಲ್ಲೆಯಲ್ಲಿ ಐಟಿ ಇಲಾಖೆಗೆ ಅತೀ ಹೆಚ್ಚಿನ ತೆರಿಗೆ ಪಾವತಿದಾರನಲ್ಲಿ ನಾನು ಒಬ್ಬನಾಗಿದ್ದೇನೆ. ಜತೆಗೆ ತೆರಿಗೆ ಇಲಾಖೆಯಲ್ಲಿ ಹಾಗೂ ಬ್ಯಾಂಕ್ ನಲ್ಲಾಗಲಿ, ನನ್ನ ವ್ಯವಹಾರಗಳ ಬಗ್ಗೆ ಕ್ಲೀನ್ ರೆಕಾರ್ಡ್ ಇದೆ. ಹೀಗಾಗಿ ಶುಭ್ರ ವ್ಯಕ್ತಿತ್ವಕ್ಕೆ ಕಪ್ಪು ಚುಕ್ಕಿ ಇಡುವ ವ್ಯರ್ಥ ಪ್ರಯತ್ನ ಕೆಲವರು ಮಾಡುತ್ತಿದ್ದಾರೆ ಎಂದರು.
ದಾಯ್ಜಿವಲ್ಡ್ ವಾಹಿನಿಯ ಉಡುಪಿ ಸ್ಟುಡಿಯೋದಲ್ಲಿ ಸಂದರ್ಶನ ನೀಡಿದ ನಂತರ ಅವರು ಪಡುಬಿದ್ರಿಯಲ್ಲಿ ರಾಹುಲ್ ಗಾಂಧಿಯವರೊಂದಿಗೆ ಜನಾಶೀರ್ವಾದ ಯಾತ್ರೆಯ ರೋಡ್ ಶೋ ಪಾಲ್ಗೊಂಡರು ಮತ್ತು ಬಿಜೆಪಿ ಕೇಂದ್ರ ನಾಯಕತ್ವದಲ್ಲಿ ನಮೋ ಎಂದರೆ ನಮಗೆ ಮೋಸ ಎಂದು ವಾಗ್ದಾಳಿ ನಡೆಸಿದರು.
ಸಂದರ್ಶನದಲ್ಲಿ ಅವರು ತಮ್ಮ ಮಾತು ಮುಂದುವರಿಸುತ್ತಾ, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ರಾಹುಲ್ ಗಾಂಧಿಯರಿಗೆ ಅತ್ಯಂತ ಒತ್ತಡಭರಿತ ವೇಳಾಪಟ್ಟಿ ಇರುವ ಕಾರಣ ಅವರಿಗೆ ಈ ಬಾರಿ ಉಡುಪಿ ನಗರಕ್ಕೆ ಬರಲು ಸಾಧ್ಯವಿಲ್ಲ ಎಂದು ಹೇಳಿದರು. ಆದರೆ ಚುನಾವಣೆಗೆ ಮುಂಚಿತವಾಗಿ, ಅವರನ್ನು ಉಡುಪಿಗೆ ಆಹ್ವಾನಿಸುವ ಯೋಜನೆ ಇದ್ದು, ಆ ಸಂದರ್ಭ ಉಡುಪಿ ನಗರದಲ್ಲೂ ರೋಡ್ ಶೋ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದರು.
ಇನ್ನೂ 193 ಕೋಟಿ ರೂಪಾಯಿಗಳ ಬ್ಯಾಂಕ್ ಹಗರಣದ ಆರೋಪದ ಬಗ್ಗೆ ಪ್ರಶ್ನಿಸಿದಾಗ , ಇಲ್ಲಿನ ಸ್ಥಳೀಯ ಬಿಜೆಪಿ ನಾಯಕರು ಸೇರಿ ಸಾಮಾಜಿಕ ಕಾರ್ಯಕರ್ತ ಟಿ.ಜೆ ಅಬ್ರಹಾಂ ತಪ್ಪು ದಾರಿ ತಪ್ಪಿಸಿದ್ದಾರೆ. ಆದರೆ ಈ ಆರೋಪಗಳನ್ನು ಮಾಡಿರುವ ಜನರೇ ಇದರಿಮ್ದ ತೀವ್ರ ಮುಜುಗರಕ್ಕೊಳಗಾಗಿದ್ದಾರೆ ಎಂದರು.