ಉಡುಪಿ, ಮೇ 24 (Daijiworld News/MB) : ಉಡುಪಿಯಲ್ಲಿ ಮೂವರು ಪೊಲೀಸರಿಗೆ ಕೊರೊನಾ ಸೋಂಕು ದೃಢಪಟ್ಟ ಹಿನ್ನಲೆ ಅಜೆಕಾರು, ಕಾರ್ಕಳ, ಬ್ರಹ್ಮಾವರ ಪೊಲೀಸ್ ಠಾಣೆಯನ್ನು ಸೀಲ್ಡೌನ್ ಮಾಡಲಾಗಿದೆ.
ಶನಿವಾರ ಸಂಜೆ 5 ರಿಂದ ಭಾನುವಾರ ಮಧ್ಯಾಹ್ನ 12 ಗಂಟೆಯವರೆಗೆ ಉಡುಪಿಯಲ್ಲಿ ಒಟ್ಟು 18 ಕೊರೊನಾ ಪ್ರಕರಣಗಳು ದೃಢಪಟ್ಟಿದ್ದು ಈ ಪೈಕಿ ಅಜೆಕಾರು ಎಎಸ್ಐ, ಕಾರ್ಕಳ ಠಾಣೆಯ ಪೊಲೀಸ್ ಪೇದೆ ಹಾಗೂ ಬ್ರಹ್ಮಾವರ ಪೊಲೀಸ್ ಠಾಣೆಯ ಪೇದೆಗೆ ಕೊರೊನಾ ದೃಢಪಟ್ಟಿದೆ. ಈ ಹಿನ್ನಲೆಯಲ್ಲಿ ಮೂರು ಪೊಲೀಸ್ ಠಾಣೆಯನ್ನು ಸೀಲ್ಡೌನ್ ಮಾಡಲಾಗಿದೆ.
ಇನ್ನು ಕಾರ್ಕಳ ಗ್ರಾಮಾಂತರ, ನಗರ ಪೊಲೀಸ್ ಠಾಣೆ ಹಾಗೂ ಸರ್ಕಲ್ ಇನ್ಸ್ಪೆಕ್ಟರ್ ಕಚೇರಿಯು ಒಂದೇ ಕಟ್ಟಡದಲ್ಲಿದ್ದು ಆದ್ದರಿಂದ ಮೂರು ಠಾಣೆಯನ್ನು ಸೀಲ್ಡೌನ್ ಮಾಡಲಾಗಿದೆ.
ಈ ಮೂವರ ಕೊರೊನಾ ಸಂಪರ್ಕವನ್ನು ಪತ್ತೆಹಚ್ಚಲಾಗುತ್ತಿದ್ದು ಇವರಿಗೆ ಯಾವುದೇ ಪ್ರವಾಸದ ಇತಿಹಾಸವಿಲ್ಲ. ಈ ಪೊಲೀಸರಿಗೆ ಕೊರೊನಾ ದೃಢಪಟ್ಟ ಹಿನ್ನಲೆಯಲ್ಲಿ ಹಲವು ಪೊಲೀಸರನ್ನು ಕ್ವಾರಂಟೈನ್ಗೆ ಒಳಪಡಿಸಲಾಗುತ್ತದೆ ಎಂದು ಮೂಲಗಳು ತಿಳಿಸಿದೆ.
ಇನ್ನು ಈ ಬಗ್ಗೆ ಮಾಹಿತಿ ನೀಡಿರುವ ಉಡುಪಿ ಜಿಲ್ಲಾಧಿಕಾರಿ ಜಿ.ಜಗದೀಶ್, ಮೂರು ಪೊಲೀಸ್ ಠಾಣೆಯನ್ನು ಸೀಲ್ಡೌನ್ ಮಾಡಲಾಗಿದೆ. ಈ ಮೂರು ಠಾಣೆಗಳನ್ನು ಸ್ಯಾನಿಟೈಸ್ ಮಾಡಿಸಲಿದ್ದು ೪೮ ಗಂಟೆಗಳಲ್ಲಿ ಪುನಃ ಕಾರ್ಯ ನಿರ್ವಹಿಸಲಿದೆ ಎಂದು ತಿಳಿಸಿದ್ದಾರೆ.