ಕಾಸರಗೋಡು, ಮೇ 24 (DaijiworldNews/SM): ಜಿಲ್ಲೆಯಲ್ಲಿ ರವಿವಾರದಂದು ಐವರಲ್ಲಿ ಕೊರೊನಾ ಪಾಸಿಟಿವ್ ಕಂಡುಬಂದಿದೆ. ಈ ನಡುವೆ ಇಬ್ಬರು ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ.
ಸೋಂಕು ಖಚಿತಗೊಂಡವರೆಲ್ಲ ಮಹಾರಾಷ್ಟ್ರ ದಿಂದ ಆಗಮಿಸಿದವರಾಗಿದ್ದಾರೆ. 41 ವರ್ಷ ಪ್ರಾಯದ ಕುಂಬಳೆ ನಿವಾಸಿ, 32 ವರ್ಷದ ಮಂಗಲ್ಪಾಡಿ ನಿವಾಸಿ, 44 ಮತ್ತು 47 ವರ್ಷ ಪ್ರಾಯದ ಪೈವಳಕೆ ನಿವಾಸಿಗಳು ಹಾಗೂ 60 ವರ್ಷದ ವರ್ಕಾಡಿ ನಿವಾಸಿಯಲ್ಲಿ ಸೋಂಕು ಇರುವುದು ಖಚಿತವಾಗಿದೆ. ರವಿವಾರ ಸೋಂಕು ದೃಢಪಟ್ಟವರೆಲ್ಲರೂ ಪುರುಷರಾಗಿದ್ದಾರೆ.
ಇಬ್ಬರು ಗುಣಮುಖ ಆಸ್ಪತ್ರೆಯಿಂದ ಬಿಡುಗಡೆ:
ಇನ್ನು ಈ ನಡುವೆ ಕಾಸರಗೋಡು ಜಿಲ್ಲೆಯಲ್ಲಿ ಭಾನುವಾರ ಇಬ್ಬರು ಕೋವಿಡ್ ರೋಗದಿಂದ ಗುಣಮುಖರಾಗಿದ್ದಾರೆ. ಕಾಸರಗೋಡು ಜನರಲ್ ಆಸ್ಪತ್ರೆಯ ಆರೋಗ್ಯ ಕಾರ್ಯಕರ್ತೆ ಮತ್ತು ಕುಂಬಳೆ ನಿವಾಸಿ 41 ವರ್ಷದ ವ್ಯಕ್ತಿ ಗುಣಮುಖರಾಗಿದ್ದಾರೆ.. ಇವರಲ್ಲಿ ಕುಂಬಳೆ ನಿವಾಸಿ ಮಹಾರಾಷ್ಟ್ರದಿಂದ ಆಗಮಿಸಿದ್ದರು. ಸೋಂಕು ತಗುಲಿರುವುದು ಖಚಿತಗೊಂಡ ಹಿನ್ನೆಲೆಯಲ್ಲಿ ಉಕ್ಕಿನಡ್ಕ ಕಾಸರಗೋಡು ಮೆಡಿಕಲ್ ಕಾಲೇಜಿನಲ್ಲಿ ದಾಖಲಾಗಿದ್ದರು.
ಮೂರನೇ ಹಂತದ ಕೋವಿಡ್ ರೋಗಬಾಧಿತರಲ್ಲಿ ಜಿಲ್ಲೆಯಲ್ಲಿ ಇಲ್ಲಿಯ ತನಕ ವರದಿಯಾಗಿರುವ 36 ಕೇಸುಗಳಲ್ಲಿ 21 ಮಂದಿಯೂ ಮಹಾರಾಷ್ಟ್ರದಿಂದ ಆಗಮಿಸಿದವರಾಗಿದ್ದಾರೆ.
ಸದ್ಯ ಜಿಲ್ಲೆಯಲ್ಲಿ 3020 ಮಂದಿ ನಿಗಾದಲ್ಲಿದ್ದಾರೆ. ಮನೆಗಳಲ್ಲಿ 2481 ಮಂದಿ, ಆಸ್ಪತ್ರೆಗಳಲ್ಲಿ 539 ಮಂದಿ ಕ್ವಾರಂಟೈನ್ ನಲ್ಲಿದ್ದಾರೆ. 104 ಮಂದಿ ತಮ್ಮ ನಿಗಾ ಅವಧಿಯನ್ನು ಪೂರ್ಣಗೊಳಿಸಿದ್ದಾರೆ.
ಜಿಲ್ಲೆಯಲ್ಲಿ 6199 ಮಂದಿಯ ಸ್ಯಾಂಪಲ್ ತಪಾಸಣೆಗೆ ಕಳುಹಿಸಲಾಗಿದೆ. 5434 ಮಂದಿಯ ಫಲಿತಾಂಶ ನೆಗೆಟಿವ್ ಆಗಿದ್ದು, 367 ಮಂದಿಯ ಫಲಿತಾಂಶ ನಿರೀಕ್ಷಿಸಲಾಗಿದೆ.