ಮಂಗಳೂರು, ಮೇ 24 (DaijiworldNews/SM): ಒಂದೆಡೆ ರಜಾದಿನವಾದ ರವಿವಾರ, ಮತ್ತೊಂದೆಡೆ ಮುಸಲ್ಮಾನ ಬಾಂಧವರ ಈದುಲ್ ಫಿತ್ರ್ ಹಬ್ಬ ಈ ನಡುವೆ ರವಿವಾರ ದ.ಕ. ಜಿಲ್ಲೆ ಸಂಪೂರ್ಣ ಸ್ತಬ್ದ. ರಾಜ್ಯ ಸರಕಾರದ ಆದೇಶದಂತೆ ಮೇ 24ರ ರವಿವಾರ ದ.ಕ. ಜಿಲ್ಲೆಯಲ್ಲಿ ವಿಧಿಸಲಾಗಿದ್ದ ಲಾಕ್ ಡೌನ್ ಆದೇಶಕ್ಕೆ ಜನ ಉತ್ತಮ ಬೆಂಬಲ ನೀಡಿದ್ದು, ಲಾಕ್ ಡೌನ್ ಯಶಸ್ವಿಯಾಗಿದೆ.
ರವಿವಾರದಂದು ದ.ಕ. ಜಿಲ್ಲೆಯಲ್ಲಿ ಎಲ್ಲಾ ಚಟುವಟಿಕೆಗಳು ಸ್ತಬ್ದಗೊಂಡಿದ್ದವು. ಅಂಗಡಿ ಮುಂಗಟ್ಟುಗಳು ಮುಚ್ಚಿದ್ದವು, ಸಾರ್ವಜನಿಕ ಸಾರಿಗೆ, ಆಟೋ, ಟ್ಯಾಕ್ಸಿ ಸಂಚಾರ ಸಂಪೂರ್ಣ ಬಂದ್ ಆಗಿತ್ತು. ಜಿಲ್ಲೆಯಾದ್ಯಂತ ಅತಿ ಅಗತ್ಯ ಕಾರ್ಯಗಳಿಗಷ್ಟೇ ಜನರು ಮನೆಯಿಂದ ಹೊರಗಡೆ ಬಂದಿದ್ದರು. ಉಳಿದಂತೆ ಮನೆಯಲ್ಲೇ ಜನರು ಇದ್ದು ಸರಕಾರದ ಆದೇಶ, ಜಿಲ್ಲಾಡಳಿತದ ನಿರ್ದೇಶನಗಳಿಗೆ ಗೌರವ ನೀಡಿದ್ದಾರೆ. ಬಂಟ್ವಾಳ ತಾಲೂಕು, ಪುತ್ತೂರು ತಾಲೂಕು, ಬೆಳ್ತಂಗಡಿ ತಾಲೂಕು, ಸುಳ್ಯ, ಕಡಬ, ವಿಟ್ಲ ಪ್ರದೇಶಗಳು ಜನರ ಓಡಾಟವಿಲ್ಲದೆ ಬಿಕೋ ಎನ್ನುತ್ತಿತ್ತು. ಈ ನಡುವೆ ಪೂರ್ವ ನಿಗಧಿಯಾಗಿದ್ದ ಮದುವೆ ಸಮಾರಂಭಗಳು ಜಿಲ್ಲೆಯಲ್ಲಿ ಇಲಾಖೆಗಳ ಅನುಮತಿ ಮೇರೆಗೆ ನಡೆದಿವೆ.
ಮನೆಯಲ್ಲೇ ಸರಳ ಹಬ್ಬ ಆಚರಿಸಿದ ಮುಸಲ್ಮಾನ ಬಾಂಧವರು:
ಇನ್ನು ಮುಸಲ್ಮಾನ ಬಾಂಧವರಿಗೆ ರಂಜಾನ್ ಉಪವಾಸ ಮುಗಿಸಿದ ಬಳಿಕ ರವಿವಾರದಂದು ಈದುಲ್ ಫಿತರ್ ಹಬ್ಬದ ಸಂಭ್ರಮವಾಗಿತ್ತು. ಆದರೆ, ಕೊರೊನಾ ಸಂಕಷ್ಟ ಹಿನ್ನೆಲೆಯಲ್ಲಿ ಸರಳವಾಗಿ ಹಬ್ಬವನ್ನು ಆಚರಿಸಿದರು. ಈ ನಡುವೆ ಲಾಕ್ ಡೌನ್ ಆದೇಶ ಇದ್ದ ಕಾರಣ ಯಾರೂ ಕೂಡ ಮನೆಯಿಂದ ಹೊರ ಬಂದಿಲ್ಲ. ಕುಟುಂಬ ಸದಸ್ಯರು ದಿನವಿಡಿ ಜತೆಯಾಗಿದ್ದುಕೊಂಡು ಹಬ್ಬದ ಸವಿಯನ್ನು ಪಡೆದುಕೊಂಡರು. ಅಲ್ಲದೆ, ಮಸೀದಿಗಳು ಬಂದ್ ಆಗಿರುವ ಕಾರಣದಿಂದಾಗಿ ಮನೆಯಲ್ಲೇ ವಿಶೇಷ ಪ್ರಾರ್ಥನೆಗಳನ್ನು ನೆರವೇರಿಸಿದರು.
ಇತಿಹಾಸ ಪ್ರಸಿದ್ಧ ಉಳ್ಳಾಲ ದರ್ಗಾದಲ್ಲಿಕಳೆಗುಂದಿದ ಈದ್ ವುಲ್ ಫಿತ್ರ್ ಆಚರಣೆ:
ಲಾಕ್ ಡೌನ್ ಹಿನ್ನೆಲೆ ಉಳ್ಳಾಲದಾದ್ಯಂತ ಜನ ರಸ್ತೆಗೆ ಇಳಿಯದೆ ಸರಕಾರದ ಆದೇಶವನ್ನು ಪಾಲಿಸಿದರು. ಇತಿಹಾಸ ಪ್ರಸಿದ್ಧ ಉಳ್ಳಾಲ ಸೈಯ್ಯಿದ್ ಮದನಿ ದರ್ಗಾದಲ್ಲಿ ಈದ್ ವುಲ್ ಫಿತ್ರ್ ಆಚರಣೆಯ ವಿಶೇಷ ನಮಾಝ್ ನೆರವೇರಲಿಲ್ಲ. ಸಂದರ್ಶನಕಾರರು ದರ್ಗಾ ಪ್ರವೇಶಿಸದಂತೆ ದರ್ಗಾ ಮುಖದ್ವಾರದಲ್ಲಿ ಬ್ಯಾರಿಕೇಡ್ ಅಳವಡಿಸಲಾಗಿತ್ತು. ಈ ಮೂಲಕ ಇತಿಹಾಸದಲ್ಲಿಯೇ ಪ್ರಥಮ ಬಾರಿ ಉಳ್ಳಾಲ ದರ್ಗಾದಲ್ಲಿ ಹಬ್ಬದ ಪ್ರಯುಕ್ತ ವಿಶೇಷ ನಮಾಝ್ ನೆರವೇರದೆ ಜನ ಬೇಸರಗೊಂಡರು.
ಇನ್ನು ಉಳ್ಳಾಲ, ತಲಪಾಡಿ, ದೇರಳಕಟ್ಟೆ, ತೊಕ್ಕೊಟ್ಟು, ಕೋಟೆಕಾರು, ಕುತ್ತಾರು ಭಾಗಗಳಲ್ಲಿ ಅಂಗಡಿ ಮುಂಗಟ್ಟುಗಳು ಬೆಳಗ್ಗಿನಿಂದಲೇ ಮುಚ್ಚಲಾಗಿತ್ತು. ಜನಸಂಚಾರವೂ ವಿರಳವಾಗಿತ್ತು. ಈದ್ ವುಲ್ ಫಿತ್ರ್ ಹಬ್ಬದ ದಿನವಾದರೂ ಜನ ಮನೆಗಳಲ್ಲಿ ನಮಾಝ್ ನೆರವೇರಿಸುವ ಮೂಲಕ ಕೊರೊನಾ ತಡೆ ಜಾಗೃತಿಯಲ್ಲಿ ಕೈಜೋಡಿಸಿದರು. ದರ್ಗಾ ಸಂದರ್ಶನಕಾರರು ಹೆಚ್ಚಿನ ಸಂಖ್ಯೆಯಲ್ಲಿ ಬರುವ ಸಾಧ್ಯತೆಗಳಿರುವುದರಿಂದ ಉಳ್ಳಾಲ ವ್ಯಾಪ್ತಿಯ ಎಲ್ಲಾ ರಸ್ತೆಗಳಲ್ಲಿಯೂ ಪೊಲೀಸರು ಬಿಗಿ ಬಂದೋಬಸ್ತ್ ಏರ್ಪಡಿಸಿದ್ದರು. ಈದ್ ವುಲ್ ಫಿತ್ರ್ ಹಬ್ಬದ ಸಂದರ್ಭ ವಾಹನ, ಜನಸಂಚಾರದಿಂದ ಸದಾ ಜಿನುಗುಟ್ಟುತ್ತಿದ್ದ ನೇತ್ರಾವತಿ ಸೇತುವೆ, ತೊಕ್ಕೊಟ್ಟು ಜಂಕ್ಷನ್, ಉಳ್ಳಾಲ ಜಂಕ್ಷನ್, ದೇರಳಕಟ್ಟೆ ಜಂಕ್ಷನ್ ಬಿಕೋ ಅನ್ನುತಿತ್ತು. ಹಬ್ಬ ಹಾಗೂ ಭಾನುವಾರದ ದಿನವಾಗಿದ್ದರಿಂದ ಉಳ್ಳಾಲ ಬೀಚ್ ತೀರದಲ್ಲಿ ಜನತುಂಬುವ ಸಮಯ. ಆದರೆ ಪೊಲೀಸರು ಸಮುದ್ರ ತೀರಕ್ಕೆ ಆಗಮಿಸುತ್ತಿದ್ದ ಹಲವರನ್ನು ತರಾಟೆಗೆ ತೆಗೆದುಕೊಂಡು ವಾಪಸ್ಸು ಕಳುಹಿಸಿದರು.
ಗಡಿಭಾಗವು ಬಿಕೋ
ಕೇರಳ-ಕರ್ನಾಟಕ ಗಡಿಭಾಗದಲ್ಲಿಯೂ ಜನಸಂಚಾರವಿಲ್ಲದೆ ಪೊಲೀಸರು ಮಾತ್ರವಿದ್ದರು. ಎರಡು ರಾಜ್ಯಗಳಲ್ಲಿ ಭಾನುವಾರ ಸಂಪೂರ್ಣ ಲಾಕ್ ಡೌನ್ ಜಾರಿಯಲ್ಲಿರುವ ಹಿನ್ನೆಲೆಯಲ್ಲಿ ಪಾಸ್ ಹಿಡಿದು ಬರುವವರು ಕೂಡ ಕಂಡುಬರಲಿಲ್ಲ.
ಸ್ತಬ್ದವಾಗಿತ್ತು ಬೆಳ್ತಂಗಡಿ:
ಬೆಳ್ತಂಗಡಿ ತಾಲೂಕಿನಾದ್ಯಂತ ಅಕ್ಷರಶಃ ಲಾಕ್ ಡೌನ್ ಅಗಿತ್ತು. ಜನರೇ ಸ್ವಯಂಪ್ರೇರಿತರಾಗಿ ರಸ್ತೆಗೆ ಇಳಿಯದಿರುವುದು ಕಂಡು ಬಂತು. ವಾಹನ ಸಂಚಾರವಾಗಲಿ, ತರಕಾರಿ ಅಂಗಡಿಯಾಗಲಿ ಯಾವುದೂ ಕೂಡ ಕಾರ್ಯಾಚರಿಸಿಲ್ಲ. ಮೆಡಿಕಲ್ ಗಳು ಮಾತ್ರ ತೆರೆದಿದ್ದವು.
ಮುಂಜಾನೆ ಹಾಲು, ಪತ್ರಿಕೆ ಸರಬರಾಜು ಎಂದಿನಂತೆ ಇತ್ತು. ಸಾರ್ವಜನಿಕರು ರವಿವಾರದ ಲಾಕ್ ಡೌನ್ ಸ್ವಯಂಪ್ರೇರಿತರಾಗಿ ಸ್ಪಂದಿಸಿದ್ದರಿಂದ ಪೋಲಿಸರಿಗೆ ಯಾವುದೇ ಒತ್ತಡ ಇರಲಿಲ್ಲ.